SHIVAMOGGA LIVE NEWS | 19 AUGUST 2023
SHIMOGA : ವಿದೇಶದಿಂದ ಆಮದು ಆಗುವ ಅಡಿಕೆಯಿಂದ (Adike Rate) ಸ್ಥಳೀಯ ಬೆಳೆಗಾರರಿಗೆ ಯಾವುದೆ ಸಮಸ್ಯೆ ಆಗುವುದಿಲ್ಲ. ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಭಾರತದ ಒಟ್ಟು ಉತ್ಪಾದನೆಯ ಶೇ.2ರಷ್ಟು ಅಡಿಕೆ ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. 2004 ರಿಂದ 2014ರವರೆಗೆ ಯುಪಿಎ ಸರ್ಕಾರ ಇದ್ದಾಗ ಹೊರದೇಶದಿಂದ ಭಾರತಕ್ಕೆ ಆಮದು ಆಗುವ ಅಡಿಕೆಗೆ ಪ್ರತಿ ಟನ್ಗೆ 15 ಸಾವಿರ ರೂ. ಆಮದು ದರವಿತ್ತು. ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾದ ನಂತರ 2014 ರಿಂದ 2020ರವರಗೆ ಆಮದು ದರ ಪ್ರತಿ ಟನ್ಗೆ 25,500 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಈ ಹಿಂದೆ ನಾನು, ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪ ಅವರು ದೆಹಲಿಗೆ ಭೇಟಿ ನೀಡಿ ಆಮದು ದರ ಹೆಚ್ಚಳಕ್ಕೆ ಮನವಿ ಮಾಡಿದ್ದೆವು. ಆ ಬಳಿಕ ಪ್ರತಿ ಟನ್ ಆಮದು ಅಡಿಕೆ ದರ 35 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಶೇ.2ರಷ್ಟು ಮಾತ್ರ ಆಮದು ಆಗುತ್ತಿದೆ
ನಮ್ಮ ದೇಶದಲ್ಲಿ ಈ ವರ್ಷ 15.63 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗಿದೆ. ಈ ವರ್ಷ 17 ಸಾವಿರ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಅಡಿಕೆಯ ಶೇ.2ರಷ್ಟು ಮಾತ್ರ ಆಮದು ಆಗುತ್ತಿದೆ. ಸಾರ್ಕ್ ದೇಶಗಳ ಒಪ್ಪಂದದ ಪ್ರಕಾರ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದರು.
ಭೂತಾನ್ (Bhutan Areca) ದೇಶದಿಂದ ಅಡಿಕೆಯನ್ನು ಹಡಗುಗಳ ಮೂಲಕ ರವಾನಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಭೂತಾನ್ ದೇಶಕ್ಕೆ ಸಮುದ್ರ ಮಾರ್ಗವಿಲ್ಲ. ಬಾಂಗ್ಲಾದೇಶದಿಂದ ಹಡಗುಗಳ ಮೂಲಕ ಅಡಿಕೆ ರವಾನಿಸಿಬೇಕು. ಇದು ಭುತಾನ್ ದೇಶದ ಬೆಳೆಗಾರರಿಗೆ ಹೊರೆಯಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕ್ಕಿಂಗ್ ತುಂಬಾ ಸುಲಭ, ಇಲ್ಲಿದೆ 6 ಸಿಂಪಲ್ ಸ್ಟೆಪ್ಸ್ – JUST ಮಾಹಿತಿ
ರೈತರು ಆತಂಕಪಡುವ ಅಗತ್ಯವಿಲ್ಲ
ಅಡಿಕೆ ಧಾರಣೆ ಕಡಿಮೆಯಾಗಲಿದೆ ಎಂದು ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಇದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ. ಅಡಿಕೆ ಧಾರಣೆ ಎಂದಿಗು ಕುಸಿಯುವುದಿಲ್ಲ. ಕೇಂದ್ರ ಸರ್ಕಾರದ ಕಠಿಣ ನಿಲುವಿನಿಂದಾಗಿ ಅಡಿಕೆ ಧಾರಣೆ 50 ಸಾವಿರ ರೂ.ತನಕ ತಲುಪಿದೆ. ಈ ಹಿಂದೆ ಪ್ರತಿ ಟನ್ಗೆ 70 ಸಾವಿರ ರೂ.ವರೆಗೆ ತಲುಪಿತ್ತು. ಈಗ ಅಡಿಕೆ ಧಾರಣೆ ಸ್ಥಿರವಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಪ್ರಮುಖರಾದ ಗಿರೀಶ್ ಪಟೇಲ್, ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
