ಶಿವಮೊಗ್ಗ ಲೈವ್.ಕಾಂ | SHIMOGA | 22 ಜನವರಿ 2020

ಶಿವಮೊಗ್ಗ – ಯಶವಂತಪುರ ನಡುವೆ ಜ.23ರಿಂದ ತತ್ಕಾಲ್ ಎಕ್ಸ್ಪ್ರೆಸ್ ಹೊಸ ರೈಲು (06539-06540) ವಾರದಲ್ಲಿ ನಾಲ್ಕು ದಿನ (ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ) ಸಂಚರಿಸಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರೈಲು ಸೇವೆಗೆ ಜ.23ರಂದು ಮಧ್ಯಾಹ್ನ 3ಕ್ಕೆ ಶಿವಮೊಗ್ಗ ನಗರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ. ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ಹೇಳಿದ್ದಾರೆ.
ಬೆಳಗ್ಗೆ 9ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಶಿವಮೊಗ್ಗ ತಲುಪಿ ಶಿವಮೊಗ್ಗದಿಂದ ಮಧ್ಯಾಹ್ನ 3.30ಕ್ಕೆ ಹೊರಟು ರಾತ್ರಿ 9ಕ್ಕೆ ಯಶವಂತಪುರ ತಲುಪಲಿದೆ. ಮಾರ್ಗ ಮಧ್ಯೆ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ ಹಾಗೂ ಭದ್ರಾವತಿಯಲ್ಲಿ ರೈಲು ನಿಲುಗಡೆ ಮಾಡಲಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ-ಯಶವಂತಪುರ ಮಾರ್ಗದಲ್ಲಿ ಇಂಟರ್’ಸಿಟಿ ರೈಲು ವಾರದ ಏಳು ದಿನ ಸಂಚರಿಸಲು ಲಭ್ಯವಾಗಲಿದೆ. ನಾಗರಿಕರು ತಮ್ಮ ಅಗತ್ಯತೆಗಳಿಗೆ ಸೌಲಭ್ಯ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ವಾಣಿಜ್ಯ ಚಟುವಟಿಕೆಗಳು, ವ್ಯವಹಾರ, ಪ್ರವಾಸೋದ್ಯಮ, ಉದ್ಯೋಗಾವಕಾಶಗಳ ಲಭ್ಯತೆ ಹಾಗೂ ಜಿಲ್ಲೆಯ ಸರ್ವಾಂಗೀಣ ವಿಕಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ರೈಲ್ವೆ ಯೋಜನೆಗಳ ಅನುಷ್ಠಾನಕ್ಕೆ ಯತ್ನಿಸಲಾಗುವುದು. ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಅನುಷ್ಠಾನಗೊಳಿಸಲು ಈಗಾಗಲೆ ಯೋಜನೆಗಳನ್ನು ರೂಪಿಸಿ, ಸಂಬಂಧಿಸಿದ ಕೇಂದ್ರ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಸದಸ್ಯರಾಗಿದ್ದಾಗ ಆರಂಭಿಸಿದ್ದ ಯಶವಂತಪುರ-ಶಿವಮೊಗ್ಗ ಎಕ್ಸ್ ಪ್ರೆಸ್ ರೈಲಿಗೆ ನೂತನವಾಗಿ ವಾರದಲ್ಲಿ 4 ದಿನಗಳ ಶಿವಮೊಗ್ಗ-ಯಶವಂತಪುರ ತತ್ಕಾಲ್ ವಿಶೇಷ ರೈಲು ಮಂಜೂರಾಗಿದೆ. ಇನ್ನು ಎರಡು ನಗರಗಳ ನಡುವೆ ಇಂಟರ್ಸಿಟಿ ರೈಲು ಇನ್ಮುಂದೆ ವಾರದ 7 ದಿನವೂ ಸಂಚರಿಸಲಿದೆ ಎಂದು ತಿಳಿಸಿದ್ದಾರೆ.
New Train to be launched between Bangalore And Shimoga.