ಶಿವಮೊಗ್ಗ ಲೈವ್.ಕಾಂ | SHIMOGA | 8 ಜನವರಿ 2020

ಚೆನ್ನೈ, ತಿರುಪತಿ ರೈಲು ವೇಳಾಪಟ್ಟಿ ಬದಲಾವಣೆಗೆ ಮನವಿ. ಮೆಜಸ್ಟಿಕ್’ವರೆಗೆ ತಲುಪಬೇಕು ಜನಶತಾಬ್ದಿ. ಶೃಂಗೇರಿ ಮಾರ್ಗವಾಗಿ ಶಿವಮೊಗ್ಗದಿಂದ ಮಂಗಳೂರಿಗೆ ರೈಲ್ವೆ. ಕೋಟೆ ಗಂಗೂರಿನಲ್ಲೇ ರೈಲ್ವೆ ಟರ್ಮಿನಲ್.
ಶಿವಮೊಗ್ಗದಲ್ಲಿ ಜಿಲ್ಲೆಯಲ್ಲಿನ ರೈಲ್ವೆ ಯೋಜನೆಗಳ ಪ್ರಗತಿ ಕುರಿತು ಇವತ್ತು ಸಂಸದ ಬಿ.ವೈ.ರಾಘವೇಂದ್ರ ಸುದ್ದಿಗೊಷ್ಠಿ ನಡೆಸಿದರು. ಈ ವೇಳೆ ಹಲವು ಮಹತ್ವದ ಯೋಜನೆಗಳ ಕುರಿತು ತಿಳಿಸಿದರು.
ತಿರುಪತಿಗೆ ಮತ್ತೊಂದು ದಿನ ರೈಲು
ಈಗಾಗಲೇ ಶಿವಮೊಗ್ಗದಿಂದ ತಿರುಪತಿ ಮತ್ತು ಚೆನ್ನೈಗೆ ತತ್ಕಾಲ್ ಸ್ಕೀಂನಲ್ಲಿ ರೈಲು ಬಿಡಲಾಗಿದೆ. ತಿರುಪತಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ ರೇಣಿಗುಂಟ ರೈಲು ಸೇವೆಯನ್ನು ಮತ್ತೊಂದು ದಿನಕ್ಕೆ ವಿಸ್ತರಣೆ ಮಾಡಲಾಗಿದೆ. ‘ಜನವರಿ 9ರಂದು ಬೆಳಗ್ಗೆ 6 ಗಂಟೆಗೆ ಶಿವಮೊಗ್ಗ ರೇಣಿಗುಂಟ ರೈಲಿಗೆ ಹಸಿರು ನಿಶಾನೆ ತೋರಿಸಲಾಗುತ್ತದೆ. ಇನ್ನೊಂದು ತಿಂಗಳ ಒಳಗೆ ಈ ರೈಲಿನ ಸಮಯ ರೀ ಷೆಡ್ಯೂಯಲ್ ಮಾಡಿಸಲಾಗುತ್ತದೆ. ಇಲ್ಲಿಂದ ತಿರುಪತಿಗೆ ಹೋಗಿ ದರ್ಶನ ಪಡೆದು ಹಿಂತಿರುಗಲು ಅನುಕೂಲ ಆಗುವಂತೆ ಷೆಡ್ಯೂಯಲ್ ಮಾಡಲಾಗುತ್ತದೆ’ ಎಂದು ಸಂಸದ ರಾಘವೇಂದ್ರ ತಿಳಿಸಿದರು.
ಇದು ತತ್ಕಾಲ್ ಸೇವೆ
ತಿರುಪತಿ ಮತ್ತು ಚೆನ್ನೈಗೆ ಹೋಗುತ್ತಿರುವ ರೈಲುಗಳು ಸಂಪೂರ್ಣ ಭರ್ತಿಯಾಗಬೇಕಿದೆ. ಆಗ ಮಾತ್ರ ಇದರ ಸೇವೆ ವಿಸ್ತರಣೆಗೆ ಅನುಕೂಲವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಪಪಡಿಸಿದರು. ಸದ್ಯ ತಿರುಪತಿಗೆ ತೆರಳುವ ಶಿವಮೊಗ್ಗ ರೇಣಿಗುಂಟ ರೈಲು ಶಿವಮೊಗ್ಗದಿಂದ ರೇಣಿಗುಂಟವರೆಗೆ ಶೇ.47ರಷ್ಟು ಭರ್ತಿಯಾಗುತ್ತಿದೆ. ಹಿಂತಿರುಗುವಾಗ ಶೇ.15ರಷ್ಟು ಮಾತ್ರ ಭರ್ತಿ ಆಗುತ್ತಿದೆ. ಶಿವಮೊಗ್ಗ ಚೆನ್ನೈ ರೈಲು ವಿಚಾರದಲ್ಲಿ ಇಲ್ಲಿಂದ ತೆರಳುವಾಗ ಶೇ.67ರಷ್ಟು ಭರ್ತಿ, ಮರಳುವಾಗ ಶೇ.63ರಷ್ಟು ಭರ್ತಿಯಾಗುತ್ತಿದೆ ಎಂದರು.

ಮೇನ್ ಸ್ಟೇಷನ್’ಗೆ ತಲುಪಬೇಕು ಜನಶತಾಬ್ದಿ
ಜನಶತಾಬ್ದಿ ರೈಲು ಈಗ ಯಶವಂತಪುರದವರೆಗೆ ಮಾತ್ರ ತಲುಪುತ್ತಿದೆ. ಇದು ಮೇನ್ ಸ್ಟೇಷನ್’ವರೆಗೆ ರೀಚ್ ಆಗಬೇಕಿದೆ. ಈ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬೈಯಪ್ಪನಹಳ್ಳಿ ಟರ್ಮಿನಲ್ ನಿರ್ಮಾಣವಾದ ಬಳಿಕ ಇದು ಸಾದ್ಯವಾಗಲಿದೆ. ಇನ್ನು, ತುಮಕೂರಿನಿಂದ ಬೆಂಗಳೂರುವರೆಗೆ ಜನಶತಾಬ್ದಿ ರೈಲು ನಿಧಾನವಾಗಿ ಚಲಿಸುತ್ತಿದೆ, ಅಲ್ಲಲ್ಲಿ ನಿಲುಗಡೆ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಇದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಕೋಟೆ ಗಂಗೂರಿನಲ್ಲೇ ಟರ್ಮಿನಲ್
ರೈಲ್ವೆ ಟರ್ಮಿನಲ್ ಸ್ಥಾಪನೆಗೆ ಕೋಟೆ ಗಂಗೂರು ಸೂಕ್ತವಾಗಿದೆ ಎಂದು ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಈಗಾಗಲೇ ಟರ್ಮಿನಲ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಿ, ರೈಲ್ವೆ ಇಲಾಖೆಗೆ ಕೊಡಲಾಗಿದೆ. ಇದರಿಂದ ಕೋಟೆ ಗಂಗೂರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿದೆ. ಆದರೆ ಇದು ತಪ್ಪು ಅಭಿಪ್ರಾಯವಾಗಿದ್ದು, ಸಾಗರ, ತಾಳಗುಪ್ಪಕ್ಕೆ ತೆರಳಬೇಕಿರುವ ರೈಲುಗಳು ಆ ಮಾರ್ಗದಲ್ಲೇ ಸಂಚರಿಸಲಿದೆ ಎಂದು ರಾಘವೇಂದ್ರ ಹೇಳಿದರು.

ಹೊಸ ರೈಲುಗಳಿಗೆ ಪ್ರಸ್ತಾವನೆ
ಶಿವಮೊಗ್ಗದಿಂದ ಮತ್ತಷ್ಟು ಕಡೆಗೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟಪಡಿಸಿದರು. ಶಿವಮೊಗ್ಗ ಶಿಕಾರಿಪುರ ರಾಣೆಬೆನ್ನೂರು ಮಾರ್ಗದ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಸಿದ್ದಾಪುರದಿಂದ ತಾಳಗುಪ್ಪ ಮಾರ್ಗವಾಗಿ ಹುಬ್ಬಳ್ಳಿ ರೈಲ್ವೆ ಯೋಜನೆ, ಶಿವಮೊಗ್ಗದಿಂದ ಶೃಂಗೇರಿ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ರೈಲ್ವ ಇಲಾಖೆ ಅಧಿಕಾರಿ ಶ್ರೀಧರ್, ಸಲಹಾ ಸಮಿತಿ ಸದಸ್ಯರಾದ ಪುರುಷೋತ್ತಮ್, ಸಿ.ಹೆಚ್.ಮಾಲತೇಶ್, ಬಿಜೆಪಿ ಮುಖಂಡ ಜೋತಿ ಪ್ರಕಾಶ್, ಮುಖ್ಯಮಂತ್ರಿ ಅವರ ವಿಶೇಷ ಅಧಿಕಾರಿ ಡಾ.ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
