ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JANUARY 2021
ಅಡಕೆ ಕ್ಯಾನ್ಸರ್‍ಕಾರಕ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದರಿಂದ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ನಡುವೆ ರಾಜ್ಯ ಸರ್ಕಾರದ ವೆಬ್‍ಸೈಟ್ ಒಂದರಲ್ಲಿ ಅಡಕೆಗೆ ಡ್ರಗ್ಸ್ ಪಟ್ಟ ನೀಡಲಾಗಿದೆ. ಇದರಿಂದ ಬೆಳೆಗಾರರು ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ.
ಯಾವುದದು ವೆಬ್‍ಸೈಟ್?
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವೆಬ್‍ಸೈಟ್‍ನಲ್ಲಿ ಅಡಕೆಗೆ ಡ್ರಗ್ಸ್ ಪಟ್ಟ ನೀಡಲಾಗಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಧಾರಣೆ, ಕೃಷಿ ಸಂಬಂಧಿತ ನಿಯಮಗಳು ಸೇರಿದಂತೆ ಕೃಷಿ ಕುರಿತು ಹಲವು ಮಾಹಿತಿ ಈ ವೆಬ್‍ಸೈಟ್‍ನಲ್ಲಿ ಪ್ರಕಟವಾಗುತ್ತದೆ. ಇದೆ ವೆಬ್‍ಸೈಟ್‍ನ ‘ಔಷಧ ಮತ್ತು ಮಾದಕ ಉತ್ತೇಜಕ’ ಕಾಲಂನಲ್ಲಿ ಅಡಕೆಯನ್ನು ಸೇರಿಸಿ ಗೊಂದಲ ಸೃಷ್ಟಿಸಲಾಗಿದೆ.
ಧಾರಣೆ ಹೆಚ್ಚುತ್ತಿರುವ ಹೊತ್ತಲ್ಲಿ
ಅಡಕೆ ಹಾನಿಕಾರಕ, ಕ್ಯಾನ್ಸರ್‍ಕಾರಕ ಎಂಬ ವಿವಾದದ ನಡುವೆಯು ಉತ್ತಮ ಧಾರಣೆ ಲಿಭಿಸಿದೆ. ಈ ಹೊತ್ತಲ್ಲಿ ಅಡಕೆಯನ್ನು ‘ಔಷಧ ಮತ್ತು ಮಾದಕ ಉತ್ತೇಜಕ’ ಕೆಟಗರಿ ಅಡಿ ಸೇರಿಸಲಾಗಿದೆ. ವಿಪರ್ಯಾಸ ಅಂದರೆ ವೀಳ್ಯೆದೆಲೆಯು ಈ ಕೆಟಗರಿಯಲ್ಲಿದೆ.
ಔಷಧಿ ಹೌದು, ಆದರೆ ಮಾದಕವೇಕೆ?
ಔಷಧ ಮತ್ತು ಮಾದಕ ವಸ್ತುಗಳ ಕೆಟಗರಿಯಲ್ಲಿ ಅಡಕೆ, ವೀಳ್ಯೆದೆಲೆ ಮತ್ತು ತಂಬಾಕು ಇದೆ. ಈ ಪೈಕಿ ವೀಳ್ಯೆದೆಲೆ ಮತ್ತು ಅಡಕೆಗೆ ಔಷಧೀಯ ಗುಣವಿದೆ. ನಾಟಿ ಮತ್ತು ಆಯುರ್ವೇದ ಪದ್ಧತಿಯಲ್ಲಿ ಇವೆರಡನ್ನು ಬಳಸಲಾಗುತ್ತದೆ. ಆದರೆ ಇವೆರಡನ್ನು ಮಾದಕ ವಸ್ತು ಕೆಟಗರಿಯಲ್ಲಿ ಸೇರ್ಪಡೆ ಮಾಡಿರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಏನಂತಾರೆ ಅಧಿಕಾರಿಗಳು?
ಈ ಗೊಂದಲ ಕುರಿತು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಕಣ್ತಪ್ಪಿನಿಂದಾಗಿ ಇಂತಹ ಗೊಂದಲವಾಗಿದೆ. ಇದನ್ನು ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಸರ್ಕಾರಿ ವೆಬ್‍ಸೈಟ್‍ನಲ್ಲಿ ಇಂತಹ ತಪ್ಪುಗಳು ಆಗದಂತೆ ಕ್ರಮ ವಹಿಸಬೇಕಿದೆ. ಈಗಾಗಲೆ ಭೀತಿಯಲ್ಲಿರುವ ಬೆಳೆಗಾರರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗದಂತೆ ಗಮನಿಸಬೇಕಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]