SHIVAMOGGA LIVE NEWS | ELECTION | 06 ಮೇ 2022
ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
ವೇಳಾಪಟ್ಟಿ ಏನು?
ಮೇ 05ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಮೇ 10ಕ್ಕೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ. ಮೇ 11ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಮೇ 13ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಮೇ 20ರಂದು ಅವಶ್ಯವಿದ್ದರೆ ಮತದಾನ ನಡೆಯಲಿದೆ. ಆ ದಿನ ಬೆಳಗ್ಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ.
ಇದನ್ನೂ ಓದಿ – ಶಿವಮೊಗ್ಗ | ವಿವಿಧ ಗ್ರಾಮ ಪಂಚಾಯಿತಿಗಳ 5 ಕ್ಷೇತ್ರಕ್ಕೆ ಚುನಾವಣೆ ದಿನಾಂಕ ನಿಗದಿ
ಮರು ಮತದಾನ ಅವಶ್ಯವಿದ್ದರೆ ಮೇ 21ರಂದು ನಡೆಯಲಿದೆ. ಮೇ 22ರ ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.
ಹೇಗಿರುತ್ತೆ ಚುನಾವಣೆ ಪ್ರಕ್ರಿಯೆ?
ಈ ಚುನಾವಣೆಯನ್ನು (ELECTION) ಮತಪೆಟ್ಟಿಗೆಗಳ (ಬ್ಯಾಲಟ್ ಬಾಕ್ಸ್) ಮೂಲಕ ನಡೆಸಲಾಗುವುದು. ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಗ್ರಾ.ಪಂ ಚುನಾವಣೆಗಳ ಮತ ಪತ್ರದಲ್ಲಿ ನೋಟಾ ಅವಕಾಶ ಇರುವುದಿಲ್ಲ. ಚುನಾವಣಾ ಕಾರ್ಯ ನಿರ್ವಹಿಸಲು ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.
ಮಾದರಿ ನೀತಿ ಸಂಹಿತೆ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮದಂತೆ ಚುನಾವಣಾ ನೀತಿ ಸಂಹಿತೆಯು ಜಾರಿಗೆ ಬಂದಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 5 ರಿಂದ ಮೇ 22ರವರೆಗೆ ನೀತಿ ಸಂಹಿತೆಯಲ್ಲಿ ಜಾರಿಯಲ್ಲಿರುತ್ತದೆ.
ಮತದಾನಕ್ಕೂ 48 ಗಂಟೆ ಮೊದಲು ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಬೇಕು. ಮೊಹರು ಮಾಡಿದ ಅದರ ಕೀಯನ್ನು ತಹಶೀಲ್ದಾರ್ ಅವರಿಗೆ ಒಪ್ಪಿಸಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.