ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE|18 JUNE 2023 | FATAFAT NEWS
ಗೆದ್ದಿರುವುದು ಕಾಂಗ್ರೆಸ್ ಅಲ್ಲ, ಗ್ಯಾರಂಟಿ ಕಾರ್ಡ್
THIRTHAHALLI : ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರಂಟಿ ಆಶ್ವಾಸನೆ ಈಡೇರಿಸಲು ವಿಫಲವಾಗಿದೆ. ಇದನ್ನು ಖಂಡಿಸಿ ಬಿಜೆಪಿ ವತಿಯಿಂದ ತೀರ್ಥಹಳ್ಳಿಯಲ್ಲಿ ಪ್ರತಿಭಟನಾ ಸಭೆ ಮತ್ತು ಮೆರವಣಿಗೆ ಹಮ್ಮಿಕೊಂಡಿದ್ದೇವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಅನ್ನುವುದಕ್ಕಿಂತಲು ಅವರ ಗ್ಯಾರಂಟಿ ಕಾರ್ಡ್ ಗೆದ್ದಿದೆ. ಅಮಾಯಕ ಜನರಿಗೆ ಆಮಿಷವೊಡ್ಡಿ ಚುನಾವಣೆಯಲ್ಲಿ ಮತ ಗಳಿಕೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ತಿಂಗಳಾದರು ಆಶ್ವಾಸನೆ ಈಡೇರಿಲು ಕಾಂಗ್ರೆಸ್ ವಿಫಲವಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದರು.
ವಿಡಿಯೋ ವೈರಲ್, ತನಿಖೆಗೆ ಒತ್ತಾಯ
THIRTHAHALLI : ಯುವತಿಯರೊಂದಿಗೆ ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ಮುಖಂಡನೊಬ್ಬ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್ ಆಗಿದೆ. ಯಾವುದೆ ಪ್ರಭಾವಕ್ಕೆ ಒಳಗಾಗದೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎನ್ಎಸ್ಯುಐ ಸಂಘಟನೆ ವತಿಯಿಂದ ಡಿವೈಎಸ್ಪಿ ಅವರಿಗೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋಗಳು ವೈರಲ್, ವಿದ್ಯಾರ್ಥಿ ಸಂಘಟನೆ ನಾಯಕನ ವಿರುದ್ಧ ತನಿಖೆಗೆ ಒತ್ತಾಯ
ವಿದ್ಯುತ್ ಉತ್ಪಾದನೆ ಸ್ಥಗಿತ
KARGAL : ನೀರಿನ ಕೊರತೆ ಹಿನ್ನೆಲೆ ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಲಿಂಗನಮಕ್ಕಿಯಲ್ಲಿ 55 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಜಲಾಶಯದಲ್ಲಿ ಕೇವಲ 8.1 ಟಿಎಂಸಿ ಅಷ್ಟು ನೀರು ಇರುವುದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಮಹಾತ್ಮ ಗಾಂಧಿ ವಿದ್ಯುದಾಗಾರ, ಶರಾವತಿ, ಶರಾವತಿ ಟೈಲ್ ಲೆಸ್ ಮತ್ತು ಲಿಂಗನಮಕ್ಕಿ ವಿದ್ಯುತ್ ಘಟಕಗಳಿವೆ. ಈಗ ಲಿಂಗನಮಕ್ಕಿಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ಹಲವರಲ್ಲಿ ವಾಂತಿ, ಭೇದಿ, ಭದ್ರಾವತಿಗೆ ಡಿಹೆಚ್ಒ ಭೇಟಿ
BHADRAVATHI : ಕಳೆದ ಕೆಲವು ದಿನದಿಂದ ಭದ್ರಾವತಿ ನಗರ ಮತ್ತು ತಾಲೂಕಿನ ವಿವಿಧೆಡೆ ವಾಂತಿ, ಭೇದಿ ಪ್ರಕರಣಗಳು ಹೆಚ್ಚಳ. 30ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆದಿದ್ದು, 14 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಲರಾ ಭೀತಿ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಎಸ್.ಸುರಗೀಹಳ್ಳಿ ಅವರು ಭೇಟಿ ನೀಡಿ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆ ನಡೆಸಲಾಯಿತು. ಪೌರಾಯುಕ್ತ ಮನು ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಸೇರಿ ಹಲವರು ಸಭೆಯಲ್ಲಿದ್ದರು.
ಮಳೆಗಾಗಿ ತಿಮ್ಮಪ್ಪನ ಬೆಟ್ಟದಲ್ಲಿ ಪೂಜೆ
HOLEHONNURU : ಇಲ್ಲಿನ ಅರಹತೊಳಲು ಗ್ರಾಮದ ಜನರು ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮ ದೇವರನ್ನು ತಿಮ್ಮಪ್ಪನ ಬೆಟ್ಟಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಹೀಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಮಳೆಯಾಗಲಿದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿಅರಹತೊಳಲು ಗ್ರಾಮಸ್ಥರಿಂದ ಶಾಸಕಿಗೆ ಅಭಿನಂದನೆ
HOLEHONNURU : ಅರಹತೊಳಲು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕಿ ಶಾರದಾ ಪೂರ್ಯಾನಾಯ್ಕ್, ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಈ ವೇಳೆ ಎಸ್.ಮಂಜುನಾಥ್, ಪಾಲಾಕ್ಷಪ್ಪ ಗೌಡ, ಮಲ್ಲಪ್ಪ, ಶೇಖರಪ್ಪ, ಮಹೇಶ್ ಸೇರಿ ಹಲವರು ಇದ್ದರು.
ಬೈಕ್ ಕಳ್ಳತನ, ಸಾಗರ ಪೊಲೀಸರಿಂದ ಆರೋಪಿ ಅರೆಸ್ಟ್
SAGARA : ಬೈಕ್ ಕಳ್ಳತನ ಮಾಡಿದ್ದ ಆರೋದ ಹಿನ್ನೆಲೆ ಸೊರಬ ತಾಲೂಕಿನ ಸಂತೋಷ್ ಎಂಬಾತನನ್ನು ಸಾಗರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಪ್ಲೆಂಡರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಜೂ. 13ರಂದು ಭಾಗವತ್ ಆಸ್ಪತ್ರೆ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಸೀತಾರಾಮ್ ನೇತೃತ್ವದಲ್ಲಿ ಪಿಎಸ್ಐ ಶ್ರೀಪತಿ ಗಿನ್ನಿ, ಸಿಬ್ಬಂದಿ ರತ್ನಾಕರ್, ನಾಗರಾಜ ನಾಯ್ಕ್, ಕೆ.ಪ್ರಭಾಕರ್, ಶ್ರೀಧರ್, ಡಿ.ಕೆ.ವಿಶ್ವನಾಥ್ ತನಿಖಾ ತಂಡ ಆರೋಪಿಯನ್ನು ಬಂಧಿಸಿದೆ.
ತುಮರಿ ಆಸ್ಪತ್ರೆಗೆ ವಾಹನ ಬೇಕು
TUMARI : ನೋಂದಣಿ ಅವಧಿ ಮುಕ್ತಾಯವಾದ ಹಿನ್ನೆಲೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಔಷಧ ಪೂರೈಕೆ ವಾಹನವನ್ನು ಹಿಂತಿರುಗಿಸಲಾಗಿದೆ. ಇದರಿಂದ ಆರೋಗ್ಯ ಸೇವೆಗೆ ವಾಹನದ ಕೊರತೆ ಎದುರಾಗಿದೆ. ಬದಲಿ ವಾಹನ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದಾರೆ. ಶಿವಮೊಗ್ಗ, ಸಾಗರದಿಂದ ತುಮರಿ ಆರೋಗ್ಯ ಕೇಂದ್ರಕ್ಕೆ ಔಷಧಿ ತರಲು, ಅನಾರೋಗ್ಯಪೀಡಿತರ ಮನೆಗೆ ವೈದ್ಯಕೀಯ ಸಿಬ್ಬಂದಿ ತೆರಳಿ ಚಿಕಿತ್ಸೆ ನೀಡಲು ವಾಹನ ಬಳಕೆಯಾಗುತಿತ್ತು.
ಶಿಕಾರಿಪುರದಲ್ಲಿ ಬೈಕ್ ಕಳ್ಳ ಅರೆಸ್ಟ್
SHIKARIPURA : ಸರ್ಕಾರಿ ಆಸ್ಪತ್ರೆ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೆಂಚಿಗೊಂಡನಕೊಪ್ಪದ ಮಂಜುನಾಥ ಅಲಿಯಾಸ್ ಮಂಜಾನಾಯ್ಕ (20) ಎಂಬಾತನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಎರಡು ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಶಿವಾನಂದ ಮದರಕಂಡಿ, ಇನ್ಸ್ಪೆಕ್ಟರ್ ರುದ್ರೇಶ್ ಅವರ ಮೇಲ್ವಿಚಾರಣೆಯಲ್ಲಿ ಪಿಎಸ್ಐ ಪ್ರಶಾಂತ್ ಕುಮಾರ್ ಮತ್ತು ಕೋಮಲಾಚಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಸಿಬ್ಬಂದಿ ವೆಂಕಟೇಶ್ ಮತ್ತು ರಾಜು ನಾಯ್ಕ್ ತಂಡದಲ್ಲಿದ್ದರು.
ಸರ್ಕಾರಿ ಕಚೇರಿಯಲ್ಲಿ ಯೋಗಾಭ್ಯಾಸ
SORABA : ತಾಲೂಕು ಕಚೇರಿ ಸಭಾಂಗಣದಲ್ಲಿ ಆಯುಷ್ ಇಲಾಖೆಯ ವತಿಯಿಂದ ಕಚೇರಿಯ ಸಿಬ್ಬಂದಿಗೆ ‘ವೈ ಬ್ರೇಕ್ ಯೋಗ ಅಟ್ ಆಫೀಸ್ ಚೇರ್’ ಎಂಬ ಯೋಗ ಅಭ್ಯಾಸದ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಸರ್ಕಾರಿ ನೌಕರರ ಒತ್ತಡ ನಿವಾರಣೆ ಮತ್ತು ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ಈ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಸೂಚಿಸಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಮುಕ್ರಿ ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422