ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಫೆಬ್ರವರಿ 2022
ಹಿಜಾಬ್, ಕೇಸರಿ ಶಾಲು ಸಂಘರ್ಷ ಮಂಗಳವಾರ ಶಿವಮೊಗ್ಗ ಜಿಲ್ಲೆಯ ಹಲವು ಕಾಲೇಜಿಗೆ ವ್ಯಾಪಿಸಿತು. ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಲಾಯಿತು. ಕೆಲವು ಕಡೆಯಂತೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದು, ವಿಕೋಪಕ್ಕೆ ತಿರುಗಿತು.
ಜಿಲ್ಲೆಯಾದ್ಯಂತ ಏನೆಲ್ಲ ಆಯ್ತು?
ಸಹ್ಯಾದ್ರಿ ಕಾಲೇಜು | ಮಂಗಳವಾರವು ಹಿಜಾಬ್, ಬುರ್ಖಾ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕೇಸರಿ ಶಾಲು ಧರಿಸುವ ಬದಲು, ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದರು. ಕಾಲೇಜು ಆವರಣದಲ್ಲಿ ಮೆರವಣಿಗೆ ನಡೆಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಪ್ರಥಮ ದರ್ಜೆ ಕಾಲೇಜು, ಬಾಪೂಜಿನಗರ | ವಿದ್ಯಾರ್ಥಿಗಳ ಎರಡು ಗುಂಪು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಯೊಬ್ಬ ಕಾಲೇಜು ಮುಂಭಾಗದ ಧ್ವಜ ಸ್ತಂಭ ಹತ್ತಿ ಕೇಸರಿ ಧ್ವಜ ಕಟ್ಟಿದ. ಕೆಲವು ಹೊತ್ತಿನ ಬಳಿಕ ಕಾಲೇಜು ಕಟ್ಟಡದಿಂದ ಕಲ್ಲು ತೂರಟವಾಯಿತು. ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡರು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಿ.ಹೆಚ್.ರಸ್ತೆಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಈ ವೇಳೆ ಕಾಲೇಜಿಗೆ ಸಂಬಂಧಪಡದ ಹಲವರು ವಿದ್ಯಾರ್ಥಿಗಳ ಜೊತೆಗೂಡಿದರು. ಇದು ಪರಿಸ್ಥಿತಿಯನ್ನು ವಿಕೋಪಕ್ಕೆ ಕೊಂಡೊಯ್ಯಿತು.
ಎನ್ಇಎಸ್ ಪಿಯು ಕಾಲೇಜು | ಸೋಮವಾರ ಎಟಿಎನ್’ಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಒಂದು ದಿನ ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಇದೆ ಕ್ಯಾಂಪಸ್ ಆವರಣದಲ್ಲಿನ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜು ಆವರಣದಲ್ಲಿ ಕಲ್ಲು ತೂರಟ ಮಾಡಿದರು. ಗ್ರಂಥಾಲಯದ ಗೇಟಿಗೆ ಕಲ್ಲು ತೂರಿದ ಫೋಟೊ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಡಿವಿಎಸ್ ಕಾಲೇಜು | ಡಿವಿಎಸ್ ಕಾಲೇಜು ಕ್ಯಾಂಪಸ್ಸಿನಲ್ಲೂ ಕೇಸರಿ ಶಾಲು, ಹಿಜಾಬ್ ಸಂಘರ್ಷವಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಬಿಗಿ ಕ್ರಮ ಕೈಗೊಂಡಿದ್ದರಿಂದ ಪರಿಸ್ಥಿತಿ ಶಾಂತವಾಗಿತ್ತು. ಮಧ್ಯಾಹ್ನದವರೆಗೂ ತರಗತಿ ನಡೆದವು.
ಸಾಗರದ ಪದವಿ ಪೂರ್ವ ಕಾಲೇಜು | ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಕಲ್ಲು ತೂರಟ ನಡೆಯಿತು. ಉಪ ವಿಭಾಗಾಧಿಕಾರಿ ಕಚೇರಿ, ರಿಲಯನ್ಸ್ ಪೆಟ್ರೋಲ್ ಬಂಕ್, ಡಿಎಸ್’ಪಿ ಕಚೇರಿ ಬಳಿ ಕಲ್ಲು ತೂರಾಟವಾಗಿದೆ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಜೋಗ ಬಸ್ ನಿಲ್ದಾಣದ ಬಳಿಯು ವಿದ್ಯಾರ್ಥಿಗಳ ಗುಂಪುಗಳು ಪರಸ್ಪರ ಘೋಷಣೆ ಕೂಗಿ, ಪರಿಸ್ಥಿತಿ ಕೈ ಮೀರಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು. ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಶಾಸಕ ಹರತಾಳು ಹಾಲಪ್ಪ ಅವರ ಎದುರಲ್ಲೇ ಯುವಕರು ಕೈ ಕೈ ಮಿಲಾಯಿಸಿದರು.
ಶಿಕಾರಿಪುರ | ವಿದ್ಯಾರ್ಥಿಗಳ ಎರಡು ಗುಂಪುಗಳು ಘೋಷಣೆಗಳನ್ನು ಕೂಗುತ್ತ ಗೊಂದಲ ನಿರ್ಮಾಣವಾಯಿತು. ಈ ವೇಳೆ ಕೆಲವರು ಆ ರಸ್ತೆಯಲ್ಲಿ ತೆರಳುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸೊರಬ | ಸೊರಬ ಮತ್ತು ಆನವಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಿ ಬಂದಿದ್ದರು. ಹಿಜಾಬ್, ಕೇಸರಿ ಶಾಲು ಧರಿಸಿ ಬಂದವರನ್ನು ತರಗತಿಗೆ ಕೂರಲು ಅವಕಾಶ ನೀಡಲಿಲ್ಲ.
ಇದನ್ನೂ ಓದಿ | ಕೇಸರಿ ಧ್ವಜ ಹಾರಿಸಿದ್ದ ಧ್ವಜಸ್ತಂಭದಲ್ಲಿ ಇವತ್ತು ರಾಷ್ಟ್ರಧ್ವಜ ಹಾರಾಟ
ಇದನ್ನೂ ಓದಿ | ಹಿಜಾಬ್, ಕೇಸರಿ ಶಾಲು ಸಂಘರ್ಷ, ಶಿವಮೊಗ್ಗ ಜಿಲ್ಲೆಯಲ್ಲಿ 5 ಎಫ್ಐಆರ್ ದಾಖಲು
Shimoga District Profile | Shivamogga Live Whatsapp Number 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200