
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಮೇ 2020
ಕ್ವಾರಂಟೈನ್ ಸೆಂಟರ್‍ಗಳ ವಿರುದ್ಧ ದಿನೆ ದಿನೆ ಪ್ರತಿಭಟನೆಗಳು ಹೆಚ್ಚುತ್ತಿದೆ. ತಮ್ಮ ಏರಿಯಾ, ತಮ್ಮ ಊರಿನಲ್ಲಿ ಕ್ವಾರಂಟೈನ್ ಸೆಂಟರ್ ಬೇಡ ಎಂದು ಜನರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಜಿಲ್ಲಾಡಳಿತ ಕೂಡ ಬಿಗಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಕ್ವಾರಂಟೈನ್ ಸೆಂಟರ್ ವಿರುದ್ಧ ಆಕ್ರೋಶ ಏಕೆ?
ತಮ್ಮ ಏರಿಯಾ, ತಮ್ಮ ಊರುಗಳಲ್ಲಿ ಕ್ವಾರಂಟೈನ್ ಸೆಂಟರ್ ಸ್ಥಾಪಿಸಿದರೆ ಕರೋನ ಸೋಂಕು ಹರಡಬಹುದು ಎಂದು ಸ್ಥಳೀಯರಲ್ಲಿ ಆತಂಕ ಮೂಡಿದೆ. ಇದೆ ಕಾರಣಕ್ಕೆ ವಿವಿಧೆಡೆ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ವಾರಂಟೈನ್ ಸೆಂಟರ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲೆಲ್ಲಿ ಪ್ರತಿಭಟನೆಗಳು, ಆಕ್ರೋಶ ವ್ಯಕ್ತವಾಗುತ್ತಿದೆ?
ಸೋಮವಾರ ರಾತ್ರಿ ಶಿವಮೊಗ್ಗ ತಾಲೂಕು ಗೋಂದಿ ಚಟ್ನಹಳ್ಳಿ ಗ್ರಾಮಸ್ಥರು ತಮ್ಮೂರಿನಲ್ಲಿ ಕ್ವಾರಂಟೈನ್ ಸೆಂಟರ್ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ಯ ರಾಜ್ಯದಿಂದ ಪ್ರಯಾಣಿಕರನ್ನು ಹೊತ್ತು ಬಂದಿದ್ದ ಬಸ್ಸನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಭದ್ರಾವತಿ ರಿಪೋರ್ಟ್
ಭದ್ರಾವತಿ ತಾಲೂಕು ಹೊಸ ಸಿದ್ಧಾಪುರದಲ್ಲೂ ಜನರು ಕ್ವಾರಂಟೈನ್ ಸೆಂಟರ್‍ಗೆ ವಿರೊಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ನಗರಸಭೆಯ ಕೆಲವು ಸದಸ್ಯರು ಹಾಸ್ಟೆಲ್ ಗೇಟ್‍ಗೆ ಬೀಗ ಹಾಕಿ, ಪ್ರತಿಭಟಿಸಿದರು.
ಮಲ್ಲಿಗೇನಹಳ್ಳಿ ರಿಪೋರ್ಟ್
ಮಲ್ಲಿಗೇನಹಳ್ಳಿಯಲ್ಲಿ ಇರುವ ಹಾಸ್ಟೆಲ್‍ನಲ್ಲಿ ಅಹಮದಾಬಾದ್‍ನಿಂದ ಬಂದಿದ್ದ ಸೋಂಕಿತರ ಕ್ವಾರಂಟೈನ್‍ಗೆ ವಿರೋಧ ವ್ಯಕ್ತವಾಗಿತ್ತು. ಯಾವುದೇ ಕಾರಣಕ್ಕೂ ಸೋಂಕಿತರನ್ನು ಇಲ್ಲಿ ಇರಿಸಬಾರದು ಎಂದು ಜನರು ಒತ್ತಾಯಿಸಿದ್ದರು.
ಜಿಲ್ಲೆಯಲ್ಲಿ ಎಷ್ಟು ಕ್ವಾರಂಟೈನ್ ಸೆಂಟರ್‍ಗಳಿವೆ?
ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶದಿಂದ ಬಂದವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗುತ್ತಿದೆ. ಕರೋನ ಲಕ್ಷಣಗಳು ಕಾಣಿಸದೆ ಇದ್ದರಷ್ಟೇ ಕ್ವಾರಂಟೈನ್‍ನಲ್ಲಿ ಇದ್ದವರನ್ನು ಮನೆಗಳಿಗೆ ಕಳುಹಿಸಿ, ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಲಾಗುತ್ತದೆ. ಈ ಕಾರಣಕ್ಕಾಗಿ ಹಾಸ್ಟೆಲ್ ಮತ್ತು ವಸತಿ ಶಾಲೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 22 ಕ್ವಾರಂಟೈನ್ ಸೆಂಟರ್ ಸ್ಥಾಪಿಸಲಾಗಿದೆ. ಮೇ 11ರ ರಿಪೋರ್ಟ್ ಪ್ರಕಾರ 206 ಜನರು ವಿವಿಧೆಡೆ ಕ್ವಾರಂಟೈನ್‍ನಲ್ಲಿ ಇದ್ದಾರೆ.
ವಿರೋಧಿಸಿದರೆ ಕ್ರಮ ಗ್ಯಾರಂಟಿ
ಕ್ವಾರಂಟೈನ್ ಸೆಂಟರ್‍ಗಳಿಗೆ ವಿರೋಧ ವ್ಯಕ್ತಪಡಿಸದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ವಿರೋಧ ತೀವ್ರವಾದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕ್ಯಾ.ಮಣಿವಣ್ಣನ್ ಎಚ್ಚರಿಕೆ ನೀಡಿದ್ದಾರೆ.
ಗುಜರಾತ್ ರಾಜ್ಯದ ಅಹಮದಾಬಾದ್‍ನಿಂದ ಸೋಂಕಿತರು ಹಿಂತಿರುಗಿದ ಬಳಿಕ, ಶಿವಮೊಗ್ಗದಲ್ಲಿ ಕ್ವಾರಂಟೈನ್ ಸೆಂಟರ್‍ಗಳು ಸ್ಥಳೀಯರನ್ನು ದಿಗಿಲುಗೊಳಿಸಿವೆ. ಸದ್ಯ ಜನರ ಆತಂಕ, ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]