SHIVAMOGGA LIVE NEWS | 18 ಮಾರ್ಚ್ 2022
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರೆಗೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸರಳವಾದರೂ ಧಾರ್ಮಿಕ ವಿಧಿವಿಧಾನಗಳನ್ನು ಎಂದಿನಂತೆ ಪಾಲಿಸಿಕೊಂಡು ಬರಲಾಗುತ್ತದೆ. ಈ ಬಾರಿ ಜಾತ್ರೆಯ ವಿಶೇಷತೆಗಳೇನು? ಹೇಗಿರುತ್ತೆ ಜಾತ್ರೆ ಅನ್ನುವುದರ ಪೂರ್ಣ ಮಾಹಿತಿ ಇಲ್ಲಿದೆ.
ಶ್ರೀ ಕೋಟೆ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿಎನ್. ಮಂಜುನಾಥ್ ಮತ್ತು ಪ್ರಮುಖರು ಜಾತ್ರೆಯ ಕುರಿತು ಪೂರ್ಣ ಮಾಹಿತಿ ನೀಡಿದ್ದಾರೆ. ಅದರ ವಿವರ ಇಲ್ಲಿದೆ.
ಹೇಗಿರುತ್ತೆ ಈ ಭಾರಿ ಮಾರಿಕಾಂಬಾ ಜಾತ್ರೆ?
» 1. ಗಾಂಧಿ ಬಜಾರ್ : ಮಾ.22ರಂದು ಬೆಳಗ್ಗೆ 6 ಗಂಟೆಗೆ ಗಾಂಧಿ ಬಜಾರ್ ನಲ್ಲಿ ಶ್ರೀ ಅಮ್ಮನವರಿಗೆ ವಿಶೇಷ ಪೂಜೆ ಆರಂಭವಾಗುತ್ತದೆ. ಅಂದು ಬ್ರಾಹ್ಮಣ ನಾಡಿಗ ಕುಟುಂಬದ ಮನೆಗೆ ಹೋಗಿ ವೀಳ್ಯ ಕೊಟ್ಟು ಮಂಗಳ ವಾದ್ಯದೊಂದಿಗೆ ಪೂಜಿಸಲಾಗುತ್ತದೆ. ನಂತರ ಕುಂಬಾರ ಜನಾಂಗದವರಿಂದ ಬಾಸಿಂಗದ ಜೊತೆ ಕರೆತರಲಾಗುವುದು. ಬ್ರಾಹ್ಮಣ ಸುವಾಸಿನಿಯರು ದೇವಿಗೆ ಹುಡಿ ತುಂಬಿ ಪೂಜಿಸುವರು. ನಂತರ ವಿಶ್ವಕರ್ಮ ಜನಾಂಗದವರಿಂದ ಇಡೀ ದಿನ ಪೂಜೆಯಾಗುತ್ತದೆ. ದೇವಿಯ ದರ್ಶನಕ್ಕೆ ಅಲ್ಲಿ ಭಕ್ತರಿಗೆ ಅನುವು ಮಾಡಿಕೊಡಲಾಗುವುದು.
» 2. ಗದ್ದುಗೆಗೆ ದೇವಿ : ಮಾರ್ಚ್ 22ರ ರಾತ್ರಿ ಸುಮಾರು 9 ಗಂಟೆಗೆ ಉಪ್ಪಾರ ಕುಲದವರು ದೇವಿಯನ್ನು ಕೋಟೆ ಶ್ರೀ ಮಾರಿಕಾಂಬ ದೇವಾಲಯದ ಗದ್ದುಗೆಗೆ ಕರೆ ತರುತ್ತಾರೆ. ಇದರ ಮಧ್ಯೆ ಗಂಗಾಮತಸ್ಥ ಸಮಾಜದವರು ಗಟೇವುನೊಂದಿಗೆ ಗಾಂಧಿ ಬಜಾರ್ ನಲ್ಲಿ ದೇವರಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ.
» 3. ಗದ್ದುಗೆ ಬಳಿ ಪೂಜೆ : ಗದ್ದುಗೆ ಬಳಿ ದೇವಿ ಬಂದಾಗ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮುದಾಯದವರು ಪೂಜೆ ಸಲ್ಲಿಸುತ್ತಾರೆ. ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದ್ದಂತೆ ಕುರುಬ ಸಮಾಜದ ಚೌಡಿಕೆ ಮನೆತನದವರು ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ.
» 4. ಮಾರ್ಚ್ 23ರ ಪೂಜೆ : ಬುಧವಾರ ಬೆಳಿಗ್ಗೆ 6.30ರಿಂದ ಪೂಜೆಗಳು ನಡೆಯಲಿವೆ. ವಾಲ್ಮೀಕಿ, ಉಪ್ಪಾರರು, ಮಡಿವಾಳ ಸಮುದಾಯದವರು ನಾಲ್ಕು ದಿನ ಅಮ್ಮನವರಿಗೆ ಸರತಿಯಂತೆ ಪೂಜೆ ಸಲ್ಲಿಸುತ್ತಾರೆ. ಈ ಮಧ್ಯೆ ಪೊಲೀಸರು, ಮಾಧ್ಯಮದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಿಗೆ ವಿಶೇಷ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
» 5. ತೀರ್ಥ, ಪ್ರಸಾದ : ಈ ಭಾರಿ ದೇವಸ್ಥಾನದ ಹಲವು ಕಡೆ ತೀರ್ಥ, ಪ್ರಸಾದ ಕೊಡಲು ವ್ಯವಸ್ಥೆ ಮಾಡಲಾಗಿದೆ. ಮಡಿಲಕ್ಕಿ, ಕಾಯಿ ಒಡೆಯಲು, ಸೀರೆ ಕೊಡಲು ಪ್ರತ್ಯೇಕ ಕೌಂಟರ್ ತೆಗೆಯಲಾಗಿದೆ. ಐದು ದಿನಗಳು ಊಟ, ಉಪಹಾರ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ.
» 6. ಉಪ ಸಮಿತಿಗಳ ರಚನೆ : ಜಾತ್ರೆಯ ಯಶಸ್ಸಿಗಾಗಿ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಮಹಾನಗರ ಪಾಲಿಕೆ, ಪೊಲೀಸ್ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಜಾತ್ರೆಯ ಯಶಸ್ವಿಗಾಗಿ ಸಹಕಾರ ನೀಡಲಿವೆ.
» 7. ಸಾಂಸ್ಕೃತಿಕ ಕಾರ್ಯಕ್ರಮಗಳು : ಮಾ.24 ಮತ್ತು 25ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಹಾಗೂ ಮಾ.22ರಿಂದ 26ರವರೆಗೆ ಪ್ರತಿದಿನ ಬೆಳಿಗ್ಗೆ 7ರಿಂದ ಹರಕೆ, ಪೂಜೆ ಹಾಗೂ ಪ್ರಸಾದ ವಿನಿಯೋಗವಿರುತ್ತದೆ.
» 8. ಚಂದಾ ಪಡೆಯುತ್ತಿಲ್ಲ : ಈ ಬಾರಿ ಜಾತ್ರೆಗಾಗಿ ಯಾರಿಂದಲೂ ಚಂದಾ ಪಡೆಯುತ್ತಿಲ್ಲ. ದಾನಿಗಳೇ ದಿನಸಿ, ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ನೀಡುತ್ತಿದ್ದಾರೆ. ಪಾಲಿಕೆ ವತಿಯಿಂದ 10 ಲಕ್ಷ ರೂ. ನೀಡಲಾಗಿದೆ. ಇತರೆ ಸಂಘ ಸಂಸ್ಥೆಗಳು ಸಹ ಧನ ಸಹಾಯ ಮಾಡುತ್ತಿವೆ.
» 9. ಸ್ಟಾಲ್, ಕುಸ್ತಿ ಪಂದ್ಯಾವಳಿ ಇಲ್ಲ : ದೇವಾಲಯದ ಸುತ್ತಮುತ್ತ ಈ ಬಾರಿ ಯಾವುದೇ ಸ್ಟಾಲ್ ಗಳಿಗೆ ಅವಕಾಶವಿಲ್ಲ. ದೇವಸ್ಥಾನದಿಂದ ದೂರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು, ಪ್ರತಿ ಭಾರಿ ಇರುತ್ತಿದ್ದ ಕುಸ್ತಿ ಪಂದ್ಯಾವಳಿಯನ್ನು ಈ ಭಾರಿ ರದ್ದುಗೊಳಿಸಲಾಗಿದೆ.
» 10. ರಾಜಬೀದಿ ಉತ್ಸವ : ಮಾರ್ಚ್ 26ರಂದು ರಾತ್ರಿ 8 ಗಂಟೆಗೆ ರಾಜ ಬೀದಿ ಉತ್ಸವ ನಡೆಯಲಿದೆ. ಗಾಂಧಿ ಬಜಾರ್, ಬಿ.ಹೆಚ್.ರಸ್ತೆ ಮೂಲಕ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ದಾಟಿ ಅಲ್ಲಿರುವ ಅರಣ್ಯದಲ್ಲಿ ಅಮ್ಮನವರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಜಾತ್ರೆಯನ್ನು ಸಂಪನ್ನಗೊಳಿಸಲಾಗುವುದು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200