ಶಿವಮೊಗ್ಗ ಲೈವ್.ಕಾಂ | SHIMOGA NEWS | 7 NOVEMBER 2020
ಕರೋನದಿಂದ ಮೃತಪಟ್ಟ ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಪಾಪನಾಯ್ಕ ಅವರ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಲಾಯಿತು. ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್ ನೇತೃತ್ವದ ನಿಯೋಗ ಪಾಪನಾಯ್ಕ ಅವರ ಮನೆಗೆ ತೆರಳಿ ಚಿಕ್ ವಿತರಿಸಿದರು.
ಮೂರು ಲಕ್ಷದ ಚೆಕ್ ವಿತರಣೆ
ಪಾಪನಾಯ್ಕ ಅವರ ಪತ್ನಿ ಸವಿತಾ ಅವರಿಗೆ ಮೂರು ಲಕ್ಷ ರುಪಾಯಿಯ ಚೆಕ್ ವಿತರಿಸಲಾಯಿತು. ಹೊಸಮನೆ ತಾಂಡದಲ್ಲಿರುವ ಪಾಪನಾಯ್ಕ ಅವರ ಮನೆಗೆ ತೆರಳಿದ್ದ ಪಾಲಿಕೆ ಮೇಯರ್ ನೇತೃತ್ವದ ನಿಯೋಗ, ಚೆಕ್ ವಿತರಿಸಿ, ಸಾಂತ್ವನ ಹೇಳಿತು.
ಕೆಲವೇ ದಿನದಲ್ಲಿ ಕೆಲಸದ ಭರವಸೆ
ಪಾಪನಾಯ್ಕ ಅವರು ಮೃತಪಟ್ಟ ಬಳಿಕ ಅವರ ಪತ್ನಿಗೆ ಮೂರು ಲಕ್ಷ ಪರಿಹಾರ ಮತ್ತು ಉದ್ಯೋಗ ಕೊಡುವ ಭರವಸೆ ನೀಡಲಾಗಿತ್ತು. ಅದರಂತೆ ಈಗ ಚೆಕ್ ವಿತರಿಸಲಾಗಿದೆ. ಕೆಲವೇ ದಿನದಲ್ಲಿ ಕೆಲಸ ಕೊಡುವ ಭರವಸೆಯನ್ನು ನೀಡಲಾಗಿದೆ.
ಯಾರಿದು ಪಾಪನಾಯ್ಕ?
ಪಾಪನಾಯ್ಕ ಅವರು ಮಹಾನಗರ ಪಾಲಿಕೆ ಅನಿಲ ಚಿತಾಗಾರದಲ್ಲಿ ಕೆಲಸ ಮಾಡುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ನೂರಾರು ಮಂದಿಯ ದೇಹಗಳ ದಹನ ಮಾಡಿದ್ದರು. ಈ ವೇಳೆ ಸೋಂಕು ತಗುಲಿ ಪಾಪನಾಯ್ಕ ಅವರು ಮೃತರಾಗಿದ್ದರು. ಈ ಮೊದಲು ಪಾಪನಾಯ್ಕ ಅವರ ಮಕ್ಕಳಿಬ್ಬರು ವಿವಿಧ ಖಾಯಿಲೆಗಳಿಂದ ಮೃತರಾಗಿದ್ದರು. ಹಾಗಾಗಿ ಪತ್ನಿ ಸವಿತಾ ಈಗ ಅನಾಥವಾಗಿದ್ದಾರೆ.
ಕರೋನ ವಾರಿಯರ್ ಎಂದು ಘೋಷಿಸಿ
ಪಾಪನಾಯ್ಕ ಅವರು ಗುತ್ತಿಗೆ ಆಧಾರದ ನೌಕರನಾಗಿದ್ದರಿಂದ ಅವರನ್ನು ಕರೋನ ವಾರಿಯರ್ ಎಂದು ಘೋಷಿಸಲು ಸಾದ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಒಂದು ವೇಳೆ ಪಾಪನಾಯ್ಕ ಅವರು ಖಾಯಂ ನೌಕರನಾಗಿದ್ದರೆ 30 ಲಕ್ಷ ರೂ. ಪರಿಹಾರ ಸಿಗುತ್ತಿತ್ತು. ಸರ್ಕಾರ ಪಾಪನಾಯ್ಕ ಅವರನ್ನು ಕರೋನ ವಾರಿಯರ್ ಎಂದು ಘೋಷಿಸಿ, ಉಳಿದ ಕರೋನ ವಾರಿಯರ್‍ಗಳಂತೆ 30 ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ಶಿವಮೊಗ್ಗ ಲೈವ್.ಕಾಂ ಇತ್ತೀಚೆಗಷ್ಟೆ ವರದಿ ಪ್ರಕಟಿಸಿತ್ತು. ಇದಕ್ಕೆ ಸಾರ್ವಜನಿಕರು, ವಿವಿಧ ಸಂಘಟನೆಗಳು ಕೂಡ ಪೂರಕವಾಗಿ ಸ್ಪಂದಿಸಿವೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]