ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2020
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ನೆರವೇರಿಸುತ್ತಿರುವ ಹಿನ್ನೆಲೆ, ಶಿವಮೊಗ್ಗದ ಎಲ್ಲಾ ತಾಲೂಕಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರೋನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಂಡು ಸಂಭ್ರಮಾಚರಣೆ ಮಾಡಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.
ಶಿವಮೊಗ್ಗದಲ್ಲಿ ಹೋಮ, ಸನ್ಮಾನ
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವಿಹೆಚ್ಪಿ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾದವ್, ಭೂಮಿ ಪೂಜೆಯ ದಿನ ಬೆಳಗ್ಗೆ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ 8ಕ್ಕೆ ಶ್ರೀ ರಾಮತಾರಕ ಹೋಮ ನಡೆಸಲಾಗುತ್ತದೆ. 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕರ ಸೇವೆಯಲ್ಲಿ ಭಾಗವಹಿಸಿದವರಿಗೆ ಸನ್ಮಾನ ಮಾಡಲಾಗುತ್ತದೆ ಎಂದರು.
‘ಮನೆಯಲ್ಲೇ ಕಣ್ತುಂಬಿಕೊಳ್ಳಿ..’
ಭೂಮಿ ಪೂಜೆ ಕಾರ್ಯವನ್ನು ಎಲ್ಲರು ಮನೆಯಲ್ಲೇ ಟಿವಿಯಲ್ಲಿ ವೀಕ್ಷಿಸಬಹುದು. ಅವಕಾಶವಿರುವ ಕಡೆಯಲ್ಲಿ ದೊಡ್ಡ ಪರದೆಯನ್ನು ಅಳವಡಿಸಿ, ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಬೇಕು. ಮನೆ, ಬೀದಿ, ಗ್ರಾಮ, ದೇವಾಲಯಗಳನ್ನು ತಿಳಿರು ತೋರಣದಿಂದ ಅಲಂಕರಿಸಿ, ಭಜನೆ, ಪೂಜೆ, ಪುಷ್ಪಾರ್ಚನೆ ಮಾಡಿ ಶ್ರೀರಾಮನನ್ನು ಆರಾಧಿಸಬೇಕು. ಕಾರ್ಯಕ್ರಮ ವೀಕ್ಷಣೆಗೆ ಡಿಜಿಟಲ್ ಮಾಧ್ಯಮವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ರಮೇಶ್ ಬಾಬು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಚಂದ್ರಕಾಂತ್, ಜಿಲ್ಲಾ ಕಾರ್ಯದರ್ಶಿ ಎಸ್.ಆರ್.ನಟರಾಜ್, ಸಹಕಾರ್ಯದರ್ಶಿ ಸುಧಾಕರ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]