SHIVAMOGGA LIVE NEWS | SHIMOGA | 13 ಏಪ್ರಿಲ್ 2022
ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ದೇಣಿಗೆ ಸಂಗ್ರಹಿಸಿದ ಮಾದರಿಯಲ್ಲೇ ಸಂತೋಷ್ ಪಾಟೀಲ್ ಕುಟುಂಬಕ್ಕೂ ನೆರವಾಗಬೇಕು. ಕನಿಷ್ಠ ಐದು ಕೋಟಿ ರೂ. ದೇವಣಿಗೆ ಸಂಗ್ರಹಿಸಿ ಕೊಡಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಹರ್ಷ ಹತ್ಯೆ ಪ್ರಕರಣವನ್ನು ರಾಜ್ಯಾದ್ಯಂತ ಬಿಂಬಿಸಿದರು. ಈಗ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್ ಪ್ರಕರಣ ನಡೆದಿದೆ. ಅದಕ್ಕೆ ನೇರ ಹೊಣೆ ಸಚಿವ ಈಶ್ವರಪ್ಪ. ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸ್ವಾಮೀಜಿಗಳು ಹೋರಾಟ ಮಾಡಲಿ
ಹರ್ಷ ಹತ್ಯೆ ಪ್ರಕರಣದ ಬಳಿಕ ಹಲವು ಸ್ವಾಮೀಜಿಗಳು ಹೋರಾಟ ನಡೆಸಿದರು. ಸಂತೋಷ್ ಪಾಟೀಲ್ ಸಾವಿನ ಕುರಿತು ಆ ಸ್ವಾಮೀಜಿಗಳು ಈಗ ಹೋರಾಟ ಮಾಡಬೇಕು. ಇನ್ನು, ಕಾರ್ಪೊರೇಟರ್ ಚನ್ನಬಸಪ್ಪ ಅವರು ಹರ್ಷನ ಕೊಲೆಯನ್ನು ತಡೆಯಬಹುದಿತ್ತು ಎಂದು ಹೇಳಿಕೆ ನೀಡಿದ್ದರು. ಸಂತೋಷ್ ಪಾಟೀಲ್ 60 ಭಾರಿ ಸಚಿವ ಈಶ್ವರಪ್ಪ ಮನೆಗೆ ಬಂದು ಹೋಗಿದ್ದಾರೆ. ಅವರ ಸಾವನ್ನು ಕೂಡ ತಡೆಯಬಹುದಿತ್ತಲ್ಲ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ರೇಣುಕಾಚಾರ್ಯ ಒಬ್ಬ ಹುಚ್ಚ
ಸಂತೋಷ್ ಪಾಟೀಲ್ ಸಾವಿಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆರೋಪಕ್ಕೆ ಬೇಳೂರು ಗೋಪಾಲಕೃಷ್ಣ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ರೇಣುಕಾಚಾರ್ಯ ಗೋವಾಗೆ ಹೋಗಿದ್ದರು. ಯತ್ನಾಳ್ ಮತ್ತು ರೇಣುಕಾಚಾರ್ಯ ಒಬ್ಬರನ್ನೊಬ್ಬರು ಬೈದಾಡಿಕೊಳ್ಳುತ್ತಿದ್ದರು. ಈಗ ಇಬ್ಬರು ಒಂದಾಗಿದ್ದಾರೆ. ರೇಣುಕಾಚಾರ್ಯ ಒಬ್ಬ ಹುಚ್ಚ. ಯತ್ನಾಳ್ ಮತ್ತು ರೇಣುಕಾಚಾರ್ಯ ಸೇರಿ ಬಿಜೆಪಿಯನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಗೃಹ ಸಚಿವರು ರಾಜೀನಾಮೆ ನೀಡಲಿ
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಇದರಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೆ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು. ಪ್ರಕರಣ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್, ಜಿ.ಡಿ.ಮಂಜುನಾಥ್, ಚಿನ್ಮಯ್ ಸೇರಿದಂತೆ ಪ್ರಮುಖರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200