ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಫೆಬ್ರವರಿ 2022
ಟೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕನೊಬ್ಬ ಸ್ಮಾರ್ಟ್ ಸಿಟಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾನೆ. ಚರಂಡಿಗೆ ಸ್ಲಾಬ್ ಅಳವಡಿಸದೆ ಇರುವುದರಿಂದ ಘಟನೆ ಸಂಭವಿಸಿದೆ. ಸ್ಥಳೀಯರು ಮತ್ತು ಕೆಲಸಗಾರರು ಬಾಲಕನ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗದ ಹೊಸಮನೆ ಬಡಾವಣೆ ಸಮೀಪ ಜೈಲ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಮೂರನೆ ತರಗತಿಯ ಓದುತ್ತಿರುವ ರಾಘವೇಂದ್ರ ಗಾಯಗೊಂಡಿರುವ ಬಾಲಕ.
ಜೈಲ್ ರಸ್ತೆಯಲ್ಲಿ ಹೊಸದಾಗಿ ಚರಂಡಿ ನಿರ್ಮಿಸಲಾಗಿದೆ. ಅಲ್ಲಲ್ಲಿ ಸ್ಲಾಬ್ ಅಳವಡಿಸದೆ ಹಾಗೆ ಬಿಡಲಾಗಿದೆ. ಟೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ರಾಘವೇಂದ್ರ ಗುಂಡಿಗೆ ಬಿದ್ದಿದ್ದಾನೆ. ಆತನ ಬಲಗಣ್ಣಿನ ಮೇಲ್ಭಾಗ ಪೆಟ್ಟು ಬಿದ್ದಿದೆ. ಸ್ಥಳೀಯರು ಕೂಡಲೆ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.
ಕಣ್ಣಿನ ಮೇಲ್ಭಾಗ ಹೊಲಿಗೆ ಹಾಕಲಾಗಿದೆ. ಕಣ್ಣು ಬಿಡಲಾಗದೆ ರಾಘವೇಂದ್ರ ನೋವು ಅನುಭವಿಸುತ್ತಿದ್ದಾನೆ. ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬಾಲಕನ ಕುಟುಂಬದವರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ರಾಘವೇಂದ್ರ ಸ್ಮಾರ್ಟ್ ಸಿಟಿ ಚರಂಡಿಯೊಳಗೆ ಬೀಳುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.