ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 3 MARCH 2021
ಸ್ಮಾರ್ಟ್ ಸಿಟಿ ಆಗಬೇಕಿದ್ದ ಶಿವಮೊಗ್ಗ ಗುಂಡಿ ಸಿಟಿಯಾಗಿದೆ. ಎಲ್ಲೆಂದರಲ್ಲಿ ಗುಂಡಿಗಳು ಇರುವುದರಿಂದ ವಾಹನ ಸವಾರರು ಫಜೀತಿ ಅನುಭವಿಸುತ್ತಿದ್ದಾರೆ. ಸ್ವಲ್ಪ ಯಾಮಾರಿದರೂ ಅನಾಹುತ ಕಟ್ಟಿಟ್ಟ ಬುತ್ತಿಯಾಗಿದೆ.
ಇದು ಶಿವಮೊಗ್ಗದ ಅಚ್ಚುತರಾವ್ ಲೇಔಟ್ನ ಮೊದಲ ಅಡ್ಡರಸ್ತೆ. ಸ್ಮಾರ್ಟ್ ಸಿಟಿ ಯೋಜನೆಗಾಗಿ ನಾಲ್ಕು ಬಾರಿ ಈ ರಸ್ತೆಯಲ್ಲಿ ಗುಂಡಿಗಳನ್ನು ತೋಡಲಾಗಿದೆ. ಈಗ ಕೇಬಲ್ ಅಳವಡಿಸಲು ಜಂಕ್ಷನ್ ಬಾಕ್ಸ್ ಹಾಕಲು ಗುಂಡಿ ಅಗೆಯಲಾಗಿದೆ. ಆದರೆ ಮುನ್ನೆಚ್ಚರಿಕೆ ಫಲಕಗಳಿಲ್ಲದೆ, ಪ್ರತಿದಿನ ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
ಗುಂಡಿಯಲ್ಲಿ ಸಿಕ್ಕಿಬಿದ್ದ ಕಾರು
ಮಂಗಳವಾರ ಸಂಜೆ ಕಾರೊಂದು ಗುಂಡಿಯೊಳಗೆ ಸಿಕ್ಕಿಬಿದ್ದಿತ್ತು. ರಸ್ತೆಯ ತಿರುವಿನಲ್ಲೇ ಗುಂಡಿ ಅಗೆಯಲಾಗಿದ್ದು, ಸೂಚನಾ ಫಲಕ ಇಲ್ಲದೆ ಇರುವುದರಿಂದ ಅಪಘಾತ ಸಂಭವಿಸಿತು. ಸ್ಥಳೀಯರ ನೆರವಿನಿಂದಾಗಿ ಕಾರನ್ನು ಮೇಲೆತ್ತಲಾಯಿತು.
ಯಾವಾಗ ಮುಗಿಯುತ್ತಪ್ಪ ಈ ಗೋಳು
‘ಆರೇಳು ತಿಂಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಗುಂಡಿ ಅಗೆದು ರಸ್ತೆಯಲ್ಲ ಧೂಳಾಗಿದೆ. ಮನೆಯೊಳಗೆ ಧೂಳು ರಾಶಿಯೇ ಬರುತ್ತೆ. ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಗುಂಡಿಗಳಿಂದ ಭಾರಿ ಸಮಸ್ಯೆ ಆಗುತ್ತಿದೆ. ಗುಂಡಿಗಳ ಮುಂದೆ ಸೂಚನಾ ಫಲಕಗಳು ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ’ ಅನ್ನುತ್ತಾರೆ ಸತೀಶ್.
‘ಸೂಚನಾ ಫಲಕ ಹಾಕದೆ ಇರುವುದರಿಂದ ವಾಹನ ಸವಾರರು ಗುಂಡಿ ಬಂದು ಬೀಳುತ್ತಿದ್ದಾರೆ. ನಾವೇ ಅಲ್ಲಿ ಇಲ್ಲಿ ಟೇಪ್ ತಂದು, ಗಿಡಗಳನ್ನು, ಮರದ ಸಣ್ಣ ರೆಂಬೆಗಳನ್ನು ಇಟ್ಟು ವಾಹನ ಸವಾರರನ್ನು ಎಚ್ಚರಿಸುತ್ತಿದ್ದೇವೆ. ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾಗಿ ರೆಸ್ಪಾನ್ಸ್ ಕೊಡುತ್ತಿಲ್ಲ’ ಅನ್ನುತ್ತಾರೆ ಗುರುರಾಜ್.
ಸಮಸ್ಯೆ ಇದೊಂದೆ ಏರಿಯಾಗೆ ಸೀಮಿತವಲ್ಲ
ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಯುತ್ತಿರುವ ವಾರ್ಡ್ಗಳಲ್ಲೂ ಇದೆ ಮಾದರಿ ಸಮಸ್ಯೆ ಇದೆ. ಸೂಚನಾ ಫಲಕಗಳಿಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೆಲಸಗಳನ್ನು ನಡೆಸಲಾಗುತ್ತಿದೆ. ಕಾಮಗಾರಿಗಳ ವಿಳಂಬದಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422