ಶಿವಮೊಗ್ಗ ಲೈವ್.ಕಾಂ | SHIMOGA NEWS | 5 MARCH 2021
ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜನರು ಹೈರಾಣಾಗಿ ಹೋಗಿದ್ದಾರೆ. ಜೀವ ಭಯದಲ್ಲೇ ಮನೆಯಿಂದ ಹೊರ ಬರುವಂತಾಗಿದೆ. ನಗರದ ವಿವಿಧೆಡೆ ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ.
ಗುಂಡಿಗೆ ಬೀಳುತ್ತಿವೆ ವಾಹನಗಳು
ಸ್ಮಾರ್ಟ್ ಸಿಟಿ ಯೋಜನೆಗಾಗಿ ರಸ್ತೆಗಳಲ್ಲಿ ಗುಂಡಿಗಳನ್ನು ಅಗೆಯಲಾಗಿದೆ. ವಾಹನ ಸವಾರರು, ಕಾರು ಚಾಲಕರಿಗೆ ಈ ಗುಂಡಿಗಳು ಗೊತ್ತಾಗದೆ ಅಪಘಾತಗಳು ಸಂಭವಿಸುತ್ತಿವೆ. ಗುಂಡಿಗೆ ಬಿದ್ದು ಹಲವರು ಗಾಯಗೊಂಡಿದ್ದಾರೆ. ಕಾರುಗಳು ಸಿಕ್ಕಿಬಿದ್ದು ನಷ್ಟ ಅನುಭವಿಸುತ್ತಿದ್ದಾರೆ.
ಪ್ರತಿದಿನ ಒಂದೊಂದು ಕಡೆ ಘಟನೆ
ರಸ್ತೆಯ ತಿರುವುಗಳಲ್ಲೇ ದೊಡ್ಡ ಗುಂಡಿಗಳಿರುತ್ತವೆ. ಏಕಾಏಕಿ ಗುಂಡಿಗಳನ್ನು ತೋಡುವುದರಿಂದ ವಾಹನ ಸವಾರರಿಗೆ ಅಲ್ಲಿ ಗುಂಡಿ ಇದೆ ಅನ್ನವುದೆ ಗೊತ್ತಾಗುವುದಿಲ್ಲ. ಇದುವೆ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ‘ಇಲ್ಲಿ ಗುಂಡಿ ತೋಡಿದಾಗಿನಿಂದ ಪ್ರತಿದಿನ ಯಾರಾದರೊಬ್ಬರು ಬೀಳುತ್ತಿದ್ದಾರೆ. ನಾವೆ ಅವರಿಗೆ ನೀರು ಕುಡಿಸಿ ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ’ ಅನ್ನುತ್ತಾರೆ ಹೊಟೇಲ್ ನಡೆಸುತ್ತಿರುವ ಸತೀಶ್.
ಗುತ್ತಿಗೆದಾರು ಸಿಗಲ್ಲ, ಕಾರ್ಮಿಕರಿಗೆ ಬಯ್ಯೋಕಾಗಲ್ಲ
‘ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ನಡೆಸಬೇಕು. ಆದರೆ ಇಲ್ಲಿ ಗುತ್ತಿಗೆದಾರರು ಯಾರು, ಅಧಿಕಾರಿಗಳ್ಯಾರು ಅನ್ನುವುದೇ ಗೊತ್ತಾಗುತ್ತಿಲ್ಲ. ಗುಂಡಿಗಳನ್ನು ತೋಡಿ ಹೋಗುತ್ತಾರೆ. ಪ್ರಶ್ನಿಸಲು ಫೋನ್ ಮಾಡಿದರೆ ಅಧಿಕಾರಿಗಳು ಫೋನ್ ರಿಸೀವ್ ಮಾಡವುದಿಲ್ಲ. ಬಡ ಕಾರ್ಮಿಕರ ಜೊತೆಗೆ ಜಗಳವಾಡಲು ಸಾದ್ಯವೇ’ ಎಂದು ಪ್ರಶ್ನಿಸುತ್ತಾರೆ ಗಿರೀಶ್.
ಸೂಚನಾ ಫಲಕವಿಲ್ಲ, ಆಮೆಗತಿಯಲ್ಲಿ ಕಾಮಗಾರಿ
ಶಿವಮೊಗ್ಗದ 14 ವಾರ್ಡ್‍ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಹಂತ ಹಂತವಾಗಿ ಕಾಮಗಾರಿ ಮುಗಿಸುವ ಬದಲು, ಎಲ್ಲಾ ವಾರ್ಡುಗಳಲ್ಲಿ ಒಮ್ಮೆಲೆ ರಸ್ತೆಗಳನ್ನು ಅಗೆಯಲಾಗಿದೆ. ಅಗೆದ ಗುಂಡಿಗಳನ್ನು ಹಾಗೆ ಬಿಟ್ಟು ಜನರಿಗೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ವಿಪರ್ಯಾಸ ಅಂದರೆ ಕಾಮಗಾರಿ ನಡೆಯುತ್ತಿರುವ ಕುರಿತು ಸೂಚನಾ ಫಲಕಗಳನ್ನು ಅಳವಡಿಸದೆ ಇರುವುದರಿಂದ ಪ್ರತಿದಿನ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಜನರ ಸಂಕಷ್ಟ ದೂರಗೊಳಿಸಬೇಕಿದ್ದ ಸ್ಮಾರ್ಟ್ ಸಿಟಿ, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷದಿಂದ ಜನರ ನಿದ್ದೆಗೆಡಿಸಿದೆ.
ಈ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಗುಂಡಿಗಳನ್ನು ಮುಚ್ಚಿಸುವ ಭರವಸೆ ಕೊಟ್ಟು ಸುಮ್ಮನಾಗುತ್ತಿದ್ದಾರೆ ಅನ್ನುತ್ತಾರೆ ಜನರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]