ಶಿವಮೊಗ್ಗ ಲೈವ್.ಕಾಂ |SHIMOGA NEWS | 5 ಸೆಪ್ಟೆಂಬರ್ 2021
ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್’ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದಲ್ಲಿ ಅವರು ಆಡಿ ಬೆಳೆದ ರಸ್ತೆಯ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ನೆರೆಹೊರೆಯ ಮನೆಯವರು ಸಿಹಿ ಹಂಚಿ ಖುಷಿಪಟ್ಟರು. ಅಲ್ಲದೆ ಫೋನ್ ಮೂಲಕ ಶುಭಾಶಯಗಳನ್ನು ತಿಳಿಸಿದರು.
ಸುಹಾಸ್ ಯತಿರಾಜ್ ಅವರು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಜನರು ಅಭಿನಂದನೆ ಸಲ್ಲಿಸಿದರು. ಈ ಸಾಧನೆಗೈದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶಿವಮೊಗ್ಗದಲ್ಲೇ ಆಡಿ ಬೆಳೆದಿದ್ದರು
ಸುಹಾಸ್ ಯತಿರಾಜ್ ಅವರು ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದ ವಿನೋಬನಗರದ ಮೊದಲ ಹಂತದ ಐದನೇ ತಿರುವಿನಲ್ಲಿ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ಸುಹಾಸ್ ಪರವಾಗಿ ಘೋಷಣೆಗಳನ್ನು ಕೂಗಿ, ಸಿಹಿ ಹಂಚಿ ಖುಷಿ ಪಟ್ಟರು. ಇದೇ ರಸ್ತೆಯಲ್ಲಿ ಸುಹಾಸ್ ಆಡಿ ಬೆಳೆದಿದ್ದರು.
ವಿನೋಬನಗರದಲ್ಲಿ ಬಹು ವರ್ಷ ನೆಲಸಿದ್ದರು
ಸುಹಾಸ್ ಅವರ ತಂದೆ ಯತಿರಾಜ್ ಅವರು ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದಲ್ಲಿ ಎಂಜನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಹಾಗಾಗಿ ಸುಹಾಸ್ ಅವರು ಶಾಲೆ ಮತ್ತು ಡಿವಿಎಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದ್ದರು. ಬಳಿಕ ಸೂರತ್ಕಲ್’ನಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಯುಪಿಎಸ್’ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದರು. ವಿನೋಬನಗರದಲ್ಲೇ ಸುಹಾಸ್ ಅವರ ಮನೆ ಇದೆ.
ಶಿವಮೊಗ್ಗಕ್ಕೆ ಆಗಾಗ ಬರುತ್ತಿದ್ದರು
ಸುಹಾಸ್ ಯತಿರಾಜ್ ಅವರು ಉತ್ತರ ಪ್ರದೇಶ ಕೇಡರ್ ಐಎಎಸ್ ಅಧಿಕಾರಿಯಾಗಿದ್ದಾರೆ. ನೋಯ್ಡಾದ ಜಿಲ್ಲಾಧಿಕಾರಿಯಾಗಿದ್ದಾರೆ. ಆಗಾಗ ಶಿವಮೊಗ್ಗಕ್ಕೆ ಬರುವ ಸುಹಾಸ್ ಯತಿರಾಜ್ ಅವರು, ತಮ್ಮನ್ನು ಎತ್ತಿ ಬೆಳೆಸಿದವರು, ಆಡಿ ಬೆಳೆದವರನ್ನು ಭೇಟಿಯಾಗಿ ಮಾತನಾಡಿಸುತ್ತಾರೆ. ಅವರ ಸುಹಾಸ್ ಅವರ ತಾಯಿ ಶಿವಮೊಗ್ಗದಲ್ಲೇ ನೆಲೆಸಿದ್ದರು. ಈಗ ಅವರು ಬೆಂಗಳೂರನಲ್ಲಿ ನೆಲೆಸಿದ್ದಾರೆ.
ಫೋನ್ ಮೂಲಕ ಶುಭಾಶಯ ಕೋರಿದರು
ವಿನೋಬನಗರದ ನಿವಾಸಿಗಳು ಸುಹಾಸ್ ಪಂದ್ಯಾವಳಿಯನ್ನು ವೀಕ್ಷಿಸಿದಾರೆ. ಫೈನಲ್ ತಲುಪಿದಾಗ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದರು. ಚಿನ್ನದ ಪದಕ ಗೆದ್ದು ಬರುವಂತೆ ಹಾರೈಸಿದ್ದರು. ಬೆಳ್ಳಿ ಪದಕ ಗೆದ್ದ ಬಳಿಕವು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.
ಸುಹಾಸ್ ಬೆಳ್ಳಿ ಪದಕ ಗೆದ್ದು ಶಿವಮೊಗ್ಗ ಜಿಲ್ಲೆಯ ಜನರಲ್ಲೂ ಹೆಮ್ಮೆಯ ಭಾವ ಮೂಡಿಸಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200