ಶಿವಮೊಗ್ಗ ಲೈವ್.ಕಾಂ | SHIMOGA / SAGARA NEWS | 24 ಅಕ್ಟೋಬರ್ 2020
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮಿತಿ ರಚಿಸಿದೆ. ದೇಗುಲದ ಆಡಳಿತಕ್ಕೆ ಸಲಹೆ ನೀಡಲು ಮತ್ತು ಮೇಲ್ವಿಚಾರಣೆಯ ಉದ್ದೇಶದಿಂದ ಈ ಸಮಿತಿ ಕಾರ್ಯನಿರ್ವಹಿಸಲಿದೆ.
ಮುಂದಿನ ವಾರ ಸಮಿತಿಯ ಮೊದಲ ಸಭೆ ನಡೆಯಲಿದೆ. ಈ ಸಮಿತಿಯು ದೇವಸ್ಥಾನದ ದೈನಂದಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬದಲಾಗಿ ದೇವಸ್ಥಾನಲ್ಲಿ ಯಾವುದೆ ಗೊಂದಲ ಆಗಬಾರದು ಎಂದು ತಡೆಯುವುದು ಇದರ ಉದ್ದೇಶ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಸಮಿತಿಯಲ್ಲಿ ಯಾರೆಲ್ಲ ಇದ್ದಾರೆ?
ಈ ಸಮಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಹರತಾಳು ಹಾಲಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಾಗರ ಉಪ ವಿಭಾಗಾಧಿಕಾರಿ ಡಾ.ಎಲ್.ನಾಗರಾಜ್, ಒಬ್ಬರು ಸರ್ಕಾರಿ ಲೆಕ್ಕ ಪರಿಶೋಧಕರು, ಧರ್ಮದರ್ಶಿ ರಾಮಪ್ಪ, ಅರ್ಚಕ ಶೇಷಗಿರಿ ಭಟ್ ಅವರು ಇದ್ದಾರೆ.
ಸಿಎಂ ಸೂಚನೆಯಂತೆ ಸಮಿತಿ
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೇವಸ್ಥಾನದಲ್ಲಿನ ಗೊಂದಲದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಈ ಕುರಿತು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಅವರೊಂದಿಗೆ ಸಿಎಂ ಚರ್ಚೆ ನಡಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಪರಿಣಿತರೊಂದಿಗೆ ಚರ್ಚಿಸಿ ಸಮಿತಿ ರಚಿಸಿದ್ದಾರೆ.
ಸಮಿತಿಗೆ ಅಧ್ಯಕ್ಷರ ನೇಮಕಾಗಿಲ್ಲ
ಸಿಗಂದೂರು ದೇಗುಲವನ್ನು ಮುಜರಾಯಿ ಇಲಾಖೆಗೆ ವಹಿಸಬೇಕು ಎಂಬ ವಾದಕ್ಕೆ ಪರ ಮತ್ತು ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅಳೆದು ತೂಗಿ ಸಮಿತಿ ರಚಿಸಿ ಜಾಣ ಹೆಜ್ಜೆ ಇಟ್ಟಿದೆ. ಈ ಸಮಿತಿಗೆ ಸದ್ಯ ಸದಸ್ಯರನ್ನಷ್ಟೇ ನೇಮಕ ಮಾಡಲಾಗಿದೆ. ಮೊದಲ ಸಭೆ ಬಳಿಕ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡುವ ಸಾದ್ಯತೆ ಇದೆ.
ಎಲ್ಲಿಯತನಕ ಇರುತ್ತೆ ಈ ಸಮಿತಿ
ಸಮಿತಿಯು ದೇವಸ್ಥಾನದ ಆಡಳಿತಕ್ಕೆ ಸಲಹೆ ಮತ್ತು ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಕಾನೂನು ಚೌಕಟ್ಟಿನಲ್ಲೇ ಈ ಸಮಿತಿ ರಚಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಈ ಸಮಿತಿ ಅಸ್ತಿತ್ವದಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]