ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 19 AUGUST 2024 : ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ (Governor) ನಡೆ ಖಂಡಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಅಲ್ಲದೆ ರಾಜ್ಯಪಾಲರ ನಡೆ ಖಂಡಿಸಿ ಮನವಿ ಸಲ್ಲಿಸಲಾಯಿತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೆರವಣಿಗೆ, ಟೈರ್ಗೆ ಬೆಂಕಿ
ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಮೀರ್ ಅಹಮದ್ ವೃತ್ತ, ನೆಹರು ರೋಡ್, ಗೋಪಿ ಸರ್ಕಲ್, ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಯಿತು. ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ಸಭೆ, ಯಾರೆಲ್ಲ ಏನೇನು ಹೇಳಿದರು?
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಹಿಂದುಳಿದ ವರ್ಗದ ಪ್ರಮುಖ ನಾಯಕ ಸಿದ್ದರಾಮಯ್ಯ. ಜನತಂತ್ರ ಅವರ ಪರವಾಗಿದೆ. ಐದು ವರ್ಷ ಸರ್ಕಾರ ನಡೆಯಲಿದೆ. ಇದನ್ನು ಅಸ್ಥಿರಗೊಳಿಸಲು ಬಿಜೆಪಿ, ರಾಜ್ಯಪಾಲರನ್ನು ಬಳಸಿಕೊಳ್ಳುತ್ತಿದೆ. ಪ್ರಜಾತಂತ್ರ ವಿರೋಧಿ ನಡೆ ಹಿನ್ನೆಲೆ ರಾಷ್ಟ್ರಪತಿಯವರು ರಾಜ್ಯಪಾಲರನ್ನು ಹಿಂದಕ್ಕೆ ಕರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಹಾಸನದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ರಕ್ಷಣೆ ಬೇಕಿದೆ. ಇತ್ತ ಶಿವಮೊಗ್ಗದಲ್ಲಿ ಹಗರಣಗಳು ನಡೆದಿವೆ. ಚೋಟಾ ಸಹಿ ಹಾಕಿ ತಂದೆಯನ್ನೇ ಜೈಲಿಗೆ ಕಳುಹಿಸಿದವರ ವಿರುದ್ಧ ತನಿಖೆಯಾಗಬೇಕಿದೆ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ನವರು ಮೊದಲು ಹಾಸನ ಮತ್ತು ಶಿವಮೊಗ್ಗ ಪಾದಯಾತ್ರೆ ನಡೆಸಲಿ ಎಂದರು.
ಶಿವಮೊಗ್ಗ, ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ 56 ಸಾವಿರ ಕೋಟಿ ರೂ. ಮೊತ್ತದ ಗ್ಯಾರಂಟಿ ಯೋಜನೆಯನ್ನು ರೂಪಿಸಿದೆ. ಬಿಜೆಪಿಯವರು ಇದ್ದಿದ್ದರೆ ಇದರಲ್ಲೂ 40 ಪರ್ಸೆಂಟ್ ಪಡೆದಿರುತ್ತಿದ್ದರು. ಮೈತುಂಬ ಭ್ರಷ್ಟಾಚಾರದ ಅರೋಪ ಹೊತ್ತವರು ನಮ್ಮ ಮುಖಂಡರ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಆರೋಪ ಮುಕ್ತವಾಗಲಿದ್ದಾರೆ. ಬಿಜೆಪಿ ಮತ್ತಷ್ಟು ಆಧೋಗತಿಗೆ ಹೋಗಲಿದೆ ಎಂದರು.
ಭದ್ರಾವತಿ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಅಶೋಕ್, ಯಡಿಯೂರಪ್ಪ, ವಿಜಯೇಂದ್ರ ಪ್ರಾಮಾಣಿಕರೆ ಎಂದು ತಿಳಿಸಬೇಕು. ಆದರೆ ಸಿದ್ದರಾಮಯ್ಯ ಕಪ್ಪು ಚುಕ್ಕಿ ರಹಿತ ರಾಜಕಾರಣಿ. ಸಿದ್ದರಾಮಯ್ಯ ವಿರುದ್ಧ ಆರೋಪ ಸಾಬೀತಾದರೆ ನೇಣು ಬಿಗಿದುಕೊಳ್ಳುತ್ತೇನೆ. ಈ ಧೈರ್ಯ ಬಿಜೆಪಿಯವರಿಗೆ ಇದೆಯಾ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಭಾರತ ಮಾತ್ರವಲ್ಲ ಜಗತ್ತಿನ ಯಾವುದೇ ನ್ಯಾಯಾಲಯದಲ್ಲಿಯು ಸಿದ್ದರಾಮಯ್ಯ ವಿರುದ್ಧ ಕ್ರಮ ಆಗುವುದಿಲ್ಲ. ಶಾಸಕರು ದೂರು ನೀಡಲು ಮುಂದಾದರೆ ರಾಜ್ಯಪಾಲರು ಎಂಟತ್ತು ದಿನದ ಬಳಿಕ ಸಮಯ ಕೊಡುತ್ತಾರೆ. ಆದರೆ ಖಾಸಗಿ ವ್ಯಕ್ತಿಗೆ ಕೂಡಲೆ ಸಮಯ ನೀಡಿದ್ದಾರೆ. ಈ ಹಿಂದೆಯೇ ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅರ್ಜಿ ಸಲ್ಲಿಕೆಯಾಗಿದ್ದರು ಅನುಮತಿ ನೀಡಿಲ್ಲ. ಬಿಜೆಪಿಯವರೇನು ಧರ್ಮರಾಯನ ಮಕ್ಕಳ, ಸತ್ಯ ಹರಿಶ್ಚಂದ್ರರಾ. ರಾಜ್ಯಪಾಲರ ನಡೆ ಖಂಡಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಾಯಾತ್ರೆ ಕೈಗೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಹೋರಾಟ ನಡೆಯಿತು. ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ಪ್ರಮುಖರಾದ ಎಂ.ಶ್ರೀಕಾಂತ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ ⇒ ಶಿಕಾರಿಪುರದಲ್ಲಿ ಯಡಿಯೂರಪ್ಪ ಮನೆ ಮುತ್ತಿಗೆ ಯತ್ನ, ಬಂಧನ