ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಆಗಸ್ಟ್ 2020
ತಾಲೂಕು ಆರೋಗ್ಯಾಧಿಕಾರಿ ಸಾವಿಗೆ ಕಾರಣರಾದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು, ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗೆ ಕರ್ತವ್ಯ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಇವತ್ತು ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಗೇಂದ್ರ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಸಿಇಒ ಪ್ರಶಾಂತ್ ಮಿಶ್ರಾ ಅವರ ಒತ್ತಡವೆ ಇದಕ್ಕೆ ಕಾರಣ. ಅವರ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತ ವೈದ್ಯರು ಒತ್ತಾಯಿಸಿದರು.
ವೈದ್ಯರು, ವೈದ್ಯಾಧಿಕಾರಿಗಳಿಗೆ ಹೆಚ್ಚುತ್ತಿದೆ ಒತ್ತಡ
ಕೋವಿಡ್ ನಿಯಂತ್ರಣಕ್ಕೆ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಶ್ರಮ ವಹಿಸುತ್ತಿದ್ದಾರೆ. ಆದರೆ ಕಾರ್ಯದ ಒತ್ತಡ ಹೆಚ್ಚಾಗುತ್ತಿದೆ. ಪ್ರತಿದಿನ ಐದರಿಂದ ಆರು ವೆಬ್ ಪೋರ್ಟಲ್‍ಗಳಿಗೆ ಡೇಟಾ ಎಂಟ್ರಿ ಮಾಡಬೇಕಿದೆ. ವರದಿಗೆ ಸಂಬಂಧಿಸಿದಂತೆ ನಿರಂತರ ಫೋನ್ ಕರೆಗಳನ್ನು ಸ್ವೀಕರಿಸಬೇಕಿದೆ. ಆದ್ದರಿಂದ ಕೋವಿಡ್ 19 ವಿವರವನ್ನು ಕಂಪ್ಯೂಟರಲ್ಲಿ ನಮೂದಿಸುವುದನ್ನು ಸರಳಗೊಳಿಸಬೇಕು ಎಂದು ವೈದ್ಯರು ಒತ್ತಾಯಿಸಿದರು.
ಕೋವಿಡ್ ಪರೀಕ್ಷೆಗೆ ಒತ್ತಡ
ಮತ್ತೊಂದೆಡೆ ಕೋವಿಡ್ ಪರೀಕ್ಷೆ ವಿಚಾರದಲ್ಲಿ ಭಾರಿ ಒತ್ತಡ ಹೇರಲಾಗುತ್ತಿದೆ. ಪ್ರತಿದಿನ ಎರಡು ಸಾವಿರದಿಂದ ಮೂರು ಸಾವಿರ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಇವುಗಳಿಂದ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]