SHIVAMOGGA LIVE|19 JUNE 2023
SHIMOGA : ಸಾಲು ಸಾಲು ಅಪಘಾತ, ಶಿವಮೊಗ್ಗ ಲೈವ್.ಕಾಂನ ನಿರಂತರ ವರದಿ ಬೆನ್ನಿಗೆ ಹೆದ್ದಾರಿ (Highway) ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಸಾಗರ ರಸ್ತೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಶಿವಮೊಗ್ಗದ ಸಾಗರ ರಸ್ತೆಗೆ ತುಮಕೂರು – ಶಿವಮೊಗ್ಗ ಚತುಷ್ಪಥ ರಸ್ತೆ ಸೇರಲಿದೆ. ಶ್ರೀರಾಮಪುರ ಬಳಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ಸಾಗರ ರಸ್ತೆಯ (Highway) ಒಂದು ಬದಿಯನ್ನು ಬಂದ್ ಮಾಡಲಾಗಿದೆ. ಮತ್ತೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೊರ ಜಿಲ್ಲೆ, ಊರುಗಳಿಂದ ಬರುವ ವಾಹನ ಚಾಲಕರಿಗೆ ಇದು ಗೊತ್ತಾಗದೆ ಅಪಘಾತಗಳು ಸಂಭವಿಸುತ್ತಿದ್ದವು. ಒಂದೇ ವಾರದಲ್ಲಿ ಮೂರು ಭೀಕರ ಅಪಘಾತ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಒಬ್ಬರು ಮೃತಪಟ್ಟಿದ್ದರು.
ನಿರಂತರ ವರದಿ ಪ್ರಕಟ
ಸಾಲು ಸಾಲು ಅಪಘಾತ ಸಂಭವಿಸಿದರು ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಇನ್ನಷ್ಟು ಅಪಘಾತ ಸಂಭವಿಸುವ ಸಾಧ್ಯತೆ ಕುರಿತು ಶಿವಮೊಗ್ಗ ಲೈವ್.ಕಾಂ ನಿರಂತರ ವರದಿ ಪ್ರಕಟಿಸಿತು. ಸಿಸಿಟಿವಿ ದೃಶ್ಯಗಳನ್ನು ಕೂಡ ಪ್ರಕಟಿಸಲಾಯಿತು. ಇದಾದ ಬಳಿಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದ ಈ ಹೆದ್ದಾರಿಗೆ ಇನ್ನೆಷ್ಟು ಬಲಿ ಬೇಕು? ಇನ್ನಾದರೂ ಎಚ್ಚೆತ್ತುಕೊಳ್ತಾರಾ ಅಧಿಕಾರಿಗಳು?
ಇದನ್ನೂ ಓದಿ – ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಇನ್ನೋವಾ, ಬೈಕ್ ಮುಖಾಮುಖಿ ಡಿಕ್ಕಿ, ಸಿಸಿಟಿವಿ ದೃಶ್ಯ ಹೇಳಿತು ಸಾಕ್ಷಿ
ಏನೇನೆಲ್ಲ ಕ್ರಮ ಕೈಗೊಂಡಿದ್ದಾರೆ?
ಕ್ರಮ 1 – ಪಿಇಎಸ್ ಕಾಲೇಜು ಮುಂಭಾಗ ಎರಡು ಪ್ರತ್ಯೇಕ ಹಂಪ್ ಹಾಕಲಾಗಿದೆ. ಶ್ರೀರಾಮಪುರದ ಬಳಿ ರಸ್ತೆಯ ಎರಡು ಬದಿಯಲ್ಲಿ ಇನ್ನು ಎರಡು ಹಂಪ್‌ಗಳನ್ನು ಹಾಕಲಾಗಿದೆ. ಅವುಗಳ ಮೇಲೆ ಬಿಳಿ ಬಣ್ಣದ ಪಟ್ಟಿಗಳನ್ನು ಬಳಿಯಲಾಗಿದೆ.
ಕ್ರಮ 2 – ರಸ್ತೆಯ ಡಿವೈಡರ್‌ಗಳ ಮೇಲೆ ಇದ್ದ ಸೂಚನಾ ಫಲಕಗಳು ಮಳೆ, ಗಾಳಿಗೆ ಉರುಳಿ ಬಿದ್ದಿದ್ದವು. ಈ ಬಗ್ಗೆ ಶಿವಮೊಗ್ಗ ಲೈವ್.ಕಾಂ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಸೂಚನ ಫಲಕಗಳನ್ನು ಸರಿ ಪಡಿಸಲಾಗಿದೆ.
ಕ್ರಮ 3 – ಗಾಡಿಕೊಪ್ಪ ಕಡೆಯಿಂದ ಬರುವ ವಾಹನಗಳು ಶ್ರೀರಾಮಪುರದ ಬಳಿ ರಸ್ತೆಯ ಮತ್ತೊಂದು ಬದಿಯಲ್ಲಿ ತೆರಳಬೇಕು. ಪಿಇಎಸ್ ಕಾಲೇಜು ಮುಂಭಾಗ ಎಡಕ್ಕೆ ತಿರುವು ಪಡೆಯಬೇಕು. ಬೀದಿ ದೀಪಗಳು ಇಲ್ಲದಿರುವುದರಿಂದ ರಾತ್ರಿ ಹೊತ್ತು ಚಾಲಕರಿಗೆ ಗೊಂದಲವಾಗುತ್ತಿತ್ತು. ಇದೆ ಕಾರಣಕ್ಕೆ ಪಿಇಎಸ್ ಕಾಲೇಜು ಮುಂದೆ ತಿರುವಿನಲ್ಲಿ ಆರೆಂಜ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಶ್ರೀರಾಮಪುರದ ಬಳಿಯು ಇದೆ ಮಾದರಿ ಲೈಟ್ ಹಾಕಲಾಗಿದೆ.
ಕ್ರಮ 4 – ವಾಹನಗಳು ತಿರುವು ಪಡೆಯಲು ಅನುಕೂಲವಾಗುವಂತೆ ಬ್ಯಾರಿಕೇಡ್ ಹಾಕಿ, ಅವುಗಳ ಮೇಲೆ ರೇಡಿಯಂ ಸ್ಟಿಕರ್ ಹಾಕಲಾಗಿದೆ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಈ ಕ್ರಮದಿಂದ ಈ ಭಾಗದಲ್ಲಿ ಮತ್ತಷ್ಟು ಅಪಘಾತ ತಪ್ಪಿದಂತಾಗಿದೆ. ಹಲವು ಸಾವು, ನೋವು ತಪ್ಪಿಸಿದಂತಾಗಿದೆ.