ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 17 ಫೆಬ್ರವರಿ 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದಲ್ಲಿ ಹಿಜಾಬ್ ವಿವಾದ ಹೊಸ ಸ್ವರೂಪ ಪಡೆದುಕೊಂಡಿದೆ. ಹಿಜಾಬ್ ಹೋರಾಟ ಶಿಕ್ಷಣ ಸಂಸ್ಥೆಗಳ ಬದಲು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಿದೆ. ತಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸುವುದಾಗಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ.
ನಗರದ ವಿವಿಧ ಪದವಿ ಕಾಲೇಜುಗಳಲ್ಲಿ ಇವತ್ತು ಕೂಡ ವಿದ್ಯಾರ್ಥಿನಿಯರು ಹಿಜಾಬ್ ಪರ ಹೋರಾಟ ನಡೆಸಿದರು. ಕೆಲವು ಹೊತ್ತು ಕಾಲೇಜುಗಳ ಪ್ರವೇಶ ದ್ವಾರದಲ್ಲಿ ನಿಂತು ತಮ್ಮ ಹಕ್ಕುಗಳ ಪರವಾಗಿ ವಿದ್ಯಾರ್ಥಿನಿಯರು ಧ್ವನಿ ಏರಿಸಿದರು. ಬಳಿಕ ಎಲ್ಲರು ಒಗ್ಗೂಡಿ ಜಿಲ್ಲಾಧಿಕಾರಿ ಕಚೇರಿಗೆ ಬಳಿಗೆ ಬಂದು ಪ್ರತಿಭಟನೆ ಆರಂಭಿಸಿದ್ದಾರೆ.
ಯಾವ್ಯಾವ ಕಾಲೇಜಿನಲ್ಲಿ ಏನಾಯ್ತು?
ಡಿವಿಎಸ್ ಶಿಕ್ಷಣ ಸಂಸ್ಥೆ : ಹಿಜಾಬ್, ಬುರ್ಖಾ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡಲಿಲ್ಲ. ಹಿಜಾಬ್, ಬುರ್ಖಾ ತೆಗೆದರಷ್ಟೆ ತರಗತಿಗೆ ಅವಕಾಶ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿತು. ಆದರೆ ವಿದ್ಯಾರ್ಥಿನಿಯರು ಪಟ್ಟು ಸಡಿಲಿಸದ ಹಿನ್ನೆಲೆ, ಮನೆಗೆ ತೆರಳುವಂತೆ ತಿಳಿಸಲಾಯಿತು. ಕಾಲೇಜು ಗೇಟಿನಿಂದ ಹೊರಗೆ ಬಂದ ವಿದ್ಯಾರ್ಥಿನಿಯರು ಪ್ರಾಂಶುಪಾಲರ ವಿರುದ್ಧ ಹರಿಹಾಯ್ದರು. ಶಿಕ್ಷಣ ಮತ್ತು ಹಿಜಾಬ್ ತಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಕಮಲಾ ನೆಹರೂ ಕಾಲೇಜು : ಇತ್ತ ಕಮಲಾ ನೆಹರೂ ಕಾಲೇಜಿನಲ್ಲಿಯು ವಿದ್ಯಾರ್ಥಿನಿಯರು ಹಿಜಾಬ್ ಪರವಾಗಿ ಧ್ವನಿ ಏರಿಸಿದರು. ಹಿಜಾಬ್ ಧರಿಸಿ ಬಂದವರಿಗೆ ತರಗತಿಗೆ ಪ್ರವೇಶ ನೀಡಲಿಲ್ಲ.
ಉಳಿದ ಕಾಲೇಜುಗಳು : ನಗರದ ಬಹುತೇಕ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿ ಒಳಗೆ ಪ್ರವೇಶ ನಿರಾಕರಿಸಲಾಯಿತು. ಹಿಜಾಬ್ ಧರಿಸಿ ಬಂದವರು ಕಾಲೇಜುಗಳಿಂದ ಹೊರ ನಡೆದರು.
ವಿದ್ಯಾರ್ಥಿನಿಯರ ಪರ ನಿಂತ ವಿದ್ಯಾರ್ಥಿಗಳು
ಹಿಜಾಬ್, ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರ ಪರವಾಗಿ ವಿದ್ಯಾರ್ಥಿಗಳು ಧ್ವನಿಗೂಡಿಸಿದರು. ತಾವು ಕೂಡ ತರಗತಿಗೆ ಹೋಗದೆ ವಿದ್ಯಾರ್ಥಿನಿಯರ ಜೊತೆ ನಿಂತರು. ಅಲ್ಲದೆ, ತಮ್ಮ ‘ಸಮುದಾಯದ ವಿದ್ಯಾರ್ಥಿನಿಯರಿಗೆ ಅವರ ಸಂಪ್ರದಾಯ ಪಾಲನೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಡಿಸಿ ಕಚೇರಿಗೆ ಹೋರಾಟ ಶಿಫ್ಟ್
ಹಿಜಾಬ್ ಹೋರಾಟ ಕಾಲೇಜು ಪ್ರವೇಶ ದ್ವಾರದಿಂದ ಈಗ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ವರ್ಗವಾಗಿದೆ. ನಿಷೇಧಾಜ್ಞೆಯನ್ನು ಲೆಕ್ಕಿಸದೆ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಹಕ್ಕುಗಳನ್ನು ಕಸಿಯುತ್ತಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಏನಿದೆ?
‘ಹೈಕೋರ್ಟ್ ಆದೇಶ ಬರುವವರೆಗೆ ತಮಗೆ ತರಗತಿಯಲ್ಲಿ ಪಾಠ ಕೇಳಲು ಅವಕಾಶ ನೀಡಬೇಕು. ಕಾಲೇಜು ಅಭಿವೃದ್ದಿ ಸಮಿತಿ ಹೊಂದಿರುವ ಸಂಸ್ಥೆಗಳಿಗೆ ಮಾತ್ರ ಸಮವಸ್ತ್ರ ನೀತಿ ಅನ್ವಯವಾಗಲಿದೆ ಎಂದು ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ತಿಳಿಸಲಾಗಿದೆ. ಈ ತೀರ್ಪು ಪದವಿ ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ’ ಎಂದು ವಿದ್ಯಾರ್ಥಿನಿಯರು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನು, ‘ಕಾಲೇಜು ಆವರಣದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು. ಸಮವಸ್ತ್ರಧಾರಿ ಪೊಲೀಸರು ಕೂಡ ಕ್ಯಾಂಪಸ್ ಪ್ರವೇಶಿಸದ ಹಾಗೆ ತಡೆಯಬೇಕು’ ಎಂದು ವಿದ್ಯಾರ್ಥಿನಿಯರು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು. ಶಿವಮೊಗ್ಗದಲ್ಲಿ ಹಿಜಾಬ್ ಹೋರಾಟ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಇದು ಶೈಕ್ಷಣಿಕ ವಾತಾವರಣವನ್ನು ಹಾಳುಗೆಡುವುದುತ್ತಿದೆ. ಪೋಷಕರು ನಿತ್ಯ ಭಯದಲ್ಲಿಯೆ ಮಕ್ಕಳನ್ನು ಶಾಲೆ, ಕಾಲೇಜುಗಳಿಗೆ ಕಳುಹಿಸುವಂತಾಗಿದೆ.
ಮತ್ತೊಂದೆಡೆ ಶಿವಮೊಗ್ಗದ ನಗರದ ಶಾಲೆ, ಕಾಲೇಜುಗಳ ಬಳಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಪ್ರಮುಖ ವೃತ್ತಗಳು, ಸ್ಥಳಗಳಲ್ಲಿಯು ಮೀಸಲು ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ | ಶಾಲೆ ಒಳಗೆ ಮಾಧ್ಯಮಗಳನ್ನು ಬಿಡದಂತೆ ಶಿವಮೊಗ್ಗದಲ್ಲಿ ಆಗ್ರಹ