SHIVAMOGGA LIVE NEWS | 7 JULY 2024
SHIMOGA : ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ಎರಡನೇ ಹಂತದ ವಿಕ್ರಮ ನಗರದಲ್ಲಿರುವ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ ಕೊಡಮಾಡುತ್ತಿರುವ ಪ್ರತಿಷ್ಠಿತ ‘ಕಲಾಶ್ರಯ’ ಪ್ರಶಸ್ತಿಗೆ (Award) ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ, ಕಲಾ ಕೈಂಕರ್ಯಕಾರ ಸುಬ್ರಮಣ್ಯ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಜು. 7ರ ಸಂಜೆ 6ಕ್ಕೆ ಹಮ್ಮಿಕೊಂಡಿರುವ ನಟನ ತರಂಗಿಣಿ- ಸಂಸ್ಥೆ 20ನೇ ವರ್ಷದ ಸಂಭ್ರಮೋತ್ಸವದಲ್ಲಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ, ನಾಡಿನ ಹಿರಿಯ ವಿದುಷಿ ಡಾ. ವೈ.ಜಿ. ಪರಿಮಳಾ ತಿಳಿಸಿದ್ದಾರೆ.
7 ದಶಕದಿಂದ ಕಲಾ ಸೇವೆ
ಶಾಸ್ತ್ರೀಯ ಸಂಗೀತ ಸೇವೆಗೆಂದೇ ಮೀಸಲಾಗಿರುವ ನಗರದ ಪ್ರಖ್ಯಾತ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, ಕಳೆದ 7 ದಶಕದಿಂದ ಸುಬ್ರಹ್ಮಣ್ಯ ಶಾಸ್ತ್ರಿಯವರು ವಿಭಿನ್ನ ಸೇವೆ ಸಲ್ಲಿಸಿದ್ದಾರೆ. ಈವರೆಗೆ ಸಾವಿರಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ, ಕಿರಿ- ಹಿರಿಯ ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ವಿವಿಧ ಸಂಘ, ಸಂಸ್ಥೆಗಳೊಂದಿಗೆ ಸುಮಧುರ ಬಾಂಧವ್ಯ ಹೊಂದಿರುವವರು. ಗಾಯನ, ವಾದನ ಕಛೇರಿಗಳಿಗೆ ಖುದ್ದು ಹಾಜರಾಗಿ, ಅಂತ್ಯದವರೆಗೂ ಉಪಸ್ಥಿತರಿದ್ದು, ಕಲಾ ಕೈಂಕರ್ಯ ಸಲ್ಲಿಸಿದ್ದಾರೆ.
ಸಂಗೀತವು ಆತ್ಮಕ್ಕೆ ಲಯ, ಮಾಧುರ್ಯ ಮತ್ತು ಸಾಮರಸ್ಯವನ್ನು ತಂದುಕೊಡುತ್ತದೆ. ಸಂಗೀತ ಕಲಿಕೆ ಒಂದು ಸೌಹಾರ್ದ ಮತ್ತು ಸುಂದರ ಸಮಾಜದ ಬೆಳವಣಿಗೆಗೆ ಅತ್ಯಗತ್ಯ . ನಾನು ನಾಟ್ಯ ತರಂಗಿಣಿ – ಕಲಾ ಶಾಲೆಯನ್ನು ಪ್ರಾರಂಭಿಸಲು ಇದೇ ಸ್ಫೂರ್ತಿ. 20 ವರ್ಷದಿಂದ ಭಗವಂತನ ಸೇವೆ ಎಂದೇ ಭಾವಿಸಿ ಸಾವಿರಾರು ಮಕ್ಕಳಿಗೆ ಬೋಧನೆ ಮಾಡಿದ್ದು, ಈ ಕೈಂಕರ್ಯ ನನಗೆ ಧನ್ಯತೆ ನೀಡಿದೆ.ವಿದುಷಿ ಪರಿಮಳ, ನಟನ ತರಂಗಿಣಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ
ಗಮಕ ಕಲಾ ಪರಿಷತ್ ಜಿಲ್ಲಾ ಕಾರ್ಯದರ್ಶಿಯಾಗಿಯೂ ಇವರು ಇತ್ತೀಚೆಗೆ ಆಯ್ಕೆಯಾಗಿರುವುದು ಬಹು ವಿಶೇಷ. ಸಂಗೀತ ಕಛೇರಿಗಳ ಆಯೋಜನೆ, ಸಂಘಟನೆ ಮತ್ತು ಕಲಾ ಪೋಷಣೆ ಮಾಡುವ ಶಾಸ್ತ್ರಿ ಅವರಿಗೆ ಕಲಾಶ್ರಯ ಪ್ರಶಸ್ತಿ ಅರಸಿ ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ್, ನಾಗರತ್ನಾ ಹೆಬ್ಬಾರ್, ಉಡುಪಿಯ ಹಿರಿಯ ಸಂಗೀತ ತಜ್ಞ ಅರವಿಂದ ಹೆಬ್ಬಾರ್, ಮೃದಂಗ ವಿದ್ವಾನ್ ನಿಶಾಂತ್ ಪುತ್ತೂರು, ಸಂಗೀತ- ನೃತ್ಯ ಕಲಾ ವಿದುಷಿ ವೈ. ಜಿ. ಶ್ರೀ ಲತಾ ಉಪಸ್ಥಿತರಿರಲಿದ್ದಾರೆ.
ಸುಬ್ರಮಣ್ಯ ಶಾಸ್ತ್ರಿ ಅವರ ಕುರಿತು
ಮಲೆನಾಡಿನ ಹಿರಿಯ ಸಂಗೀತ ಸೇವಕ ಹೆಚ್.ಆರ್. ಸುಬ್ರಮಣ್ಯ ಶಾಸ್ತ್ರಿ ಅವರು ಮೂಲತಃ ಹೊಸೂಡಿಯವರು. ತಾತ ಹೊಸೂಡಿ ವೆಂಕಟಶಾಸ್ತ್ರಿ ಅವರು ವಿದ್ವತ್ತಿನೊಂದಿಗೆ ದಾನಿಗಳಾಗಿಯೂ ಪ್ರಖ್ಯಾತರು. ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘಕ್ಕೆ ಶತಮಾನದ ಹಿಂದೆಯೇ ಸ್ಥಳದಾನ ಮಾಡಿದ್ದರು. ಈ ಕುಟುಂಬದಲ್ಲಿ ಜನಿಸಿದ ಸುಬ್ರಮಣ್ಯ ಶಾಸ್ತ್ರಿ ಮೂಲತಃ ಕೃಷಿಕ ಮನೆತನದವರಾದರೂ ವೃತ್ತಿಯಲ್ಲಿ ವ್ಯಾಪಾರ- ಉದ್ದಿಮೆದಾರರು. ಸಂಗೀತ- ಸಾಹಿತ್ಯ ಎಂಬುದು ಅವರ ವಂಶಕ್ಕೇ ಅಂಟಿದ ವಿಶೇಷ ನಂಟು.
ಶಿವಮೊಗ್ಗದ ಸುಪ್ರಸಿದ್ಧ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಸಂಸ್ಥಾಪಕರಲ್ಲಿ ಸುಬ್ರಮಣ್ಯ ಶಾಸ್ತ್ರಿ ಅವರು ಒಬ್ಬರು. ಕಳೆದ 7 ದಶಕಗಳಿಗೂ ಹೆಚ್ಚು ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ ನಗರಕ್ಕೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾ ದಿಗ್ಗಜರನ್ನು ಆಹ್ವಾನಿಸಿ ಕಛೇರಿ ಸುಧೆಯನ್ನು ಕಲಾ ಪ್ರೇಮಿಗಳಿಗೆ ಉಣ ಬಡಿಸುವಲ್ಲಿ ಇವರ ಪಾತ್ರ ದೊಡ್ಡದು. ಸದ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ 80ರ ಹರೆಯದ ಶಾಸ್ತ್ರಿ, ವಿದ್ಯಾಗಣಪತಿ ಸಮಿತಿಯ ಅಮೃತ ಮಹೋತ್ಸವವನ್ನೂ ಯಶ ಗೊಳಿಸಿ 75 ಸಂಗೀತ ಕಛೇರಿ ಸಮನ್ವಯಿಸಿ ಹೊಸ ದಾಖಲೆ ಮಾಡಿದ ತಂಡದಲ್ಲಿ ಅಗ್ರಜರು.
ಇದನ್ನೂ ಓದಿ – ಭದ್ರಾ ಜಲಾಶಯದ ಗೇಟ್‌ಗಳು ರಿಪೇರಿ ಪೂರ್ಣ, ಅಚ್ಚುಕಟ್ಟು ರೈತರ ಆತಂಕ ದೂರ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200