
ಶಿವಮೊಗ್ಗ ಲೈವ್.ಕಾಂ | SHIMOGA | 14 ಏಪ್ರಿಲ್ 2020
ಲಾಕ್ಡೌನ್ ಸಂದರ್ಭ ತುರ್ತು ಕಾರಣಕ್ಕೆ ಬೇರೆ ಜಿಲ್ಲೆಗಳಿಗೆ ತೆರಳಲು ಜಿಲ್ಲಾಡಳಿತ ಪಾಸ್ ವಿತರಿಸುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಸೋಮವಾರ ಭಾರಿ ಜನ ಸೇರಿದ್ದರು. ಕೊನೆಗೆ ಬೆರಳೆಣಿಕೆಯಷ್ಟು ಜನಕ್ಕಷ್ಟೇ ಪಾಸ್ ಲಭಿಸಿದೆ.
ಮೂರು ದಿನದ ಬಳಿಕ ಪಾಸ್
ಗುಡ್ ಫ್ರೈಡೆ, ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದಿದ್ದರಿಂದ ಪಾಸ್ ವಿತರಣೆ ಆಗಿರಲಿಲ್ಲ. ಹಾಗಾಗಿ ಸೋಮವಾರ ನೂರಾರು ಜನರು ಪಾಸ್ಗೆ ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು.

ಸಾಮಾಜಿಕ ಅಂತರಕ್ಕೆ ಬೆಲೆ ಕೊಡಲಿಲ್ಲ
ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಗೊಂದಲ ಆಗದಂತೆ ತಡೆಯಲು ಪೊಲೀಸರು ಸರತಿ ಸಾಲು ಮಾಡಿಸಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯು ಸೂಚಿಸುತ್ತಿದ್ದರು. ಆದರೆ ಈ ಬಗ್ಗೆ ಜನರು ಕ್ಯಾರೆ ಅನ್ನಲಿಲ್ಲ.

200ಕ್ಕೂ ಹೆಚ್ಚು ಅರ್ಜಿ
ಒಂದೇ ದಿನ 200ಕ್ಕೂ ಹೆಚ್ಚು ಜನರು ಪಾಸ್ಗಾಗಿ ಅರ್ಜಿ ಸಲ್ಲಿಸಿದರು. ಬಹುತೇಕರು ಆರೋಗ್ಯ ತುರ್ತು ಪರಿಸ್ಥಿತಿಯ ಕಾರಣ ನೀಡಿದ್ದರು. ಕೆಲವು ರೈತರು ಬೆಳೆ ಸಾಗಣೆಗೆ, ಮತ್ತಷ್ಟು ಮಂದಿ ಕುಟುಂಬದವರನ್ನು ಕರೆತರಲು, ಕುಟುಂಬವನ್ನು ಸೇರಲು ತೆರಳಲು ಅರ್ಜಿ ಸಲ್ಲಿಸಿದ್ದರು. ಆದರೆ ಕೂಲಂಕಷ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಅವರು 30 ಅರ್ಜಿಗಳನ್ನಷ್ಟೇ ಪರಿಗಣಿಸಿ ಪಾಸ್ ವಿತರಿಸಿದ್ದಾರೆ.

ಬಿಗಿ ಬಂದೋಬಸ್ತ್ನಲ್ಲಿ ಪಾಸ್ ವಿತರಣೆ
ಪಾಸ್ ವಿತರಣೆಗೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಸಂಜೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪೊಲೀಸರು ಮೈಕ್ನಲ್ಲಿ ಅನೌನ್ಸ್ ಮಾಡಿ ಪಾಸ್ ವಿತರಣೆ ಮಾಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]