ಶಿವಮೊಗ್ಗ ಲೈವ್.ಕಾಂ | SHIMOGA | 24 ಜನವರಿ 2020
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಇನ್ನು ಐದು ದಿನ ಬಾಕಿ ಇದೆ. ಅಷ್ಟರಲ್ಲಿ ಮೇಯರ್ ಸ್ಥಾನದ ಇಬ್ಬರು ಆಕಾಂಕ್ಷಿಗಳಿಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಪೈಕಿ ಒಬ್ಬರು ಮೇಯರ್ ಸ್ಥಾನದ ಸ್ಪರ್ಧೆಯಿಂದಲೇ ಹಿಂದೆ ಉಳಿಯುವಂತಾಗಿದ್ದು, ಮತ್ತೊಬ್ಬರು ಪಾಲಿಕೆ ಸದಸ್ಯತ್ವವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಜನವರಿ 29ರಂದು ಶಿವಮೊಗ್ಗ ಪಾಲಿಕೆ ಮೇಯರ್ ಚುನಾವಣೆಗೆ ದಿನಾಂಕ ನಿಗದಿ ಆಗಿದೆ. ಹಿಂದುಳಿದ ವರ್ಗ ಬಿ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದೆ. ಆಡಳಿತ ಪಕ್ಷದ ಸುವರ್ಣ ಶಂಕರ್ ಮತ್ತು ಅನಿತಾ ರವಿಶಂಕರ್ ಅವರು ಸಂಭವನೀಯ ಅಭ್ಯರ್ಥಿಗಳಾಗಿದ್ದಾರೆ.
ಆಕಾಂಕ್ಷಿಗಳಿಗೆ ಸಂಕಷ್ಟ ಎದುರಾಗಿರುವುದು ಏಕೆ?
ಮೇಯರ್ ಸ್ಥಾನದ ಆಕಾಂಕ್ಷಿ ಸುವರ್ಣ ಶಂಕರ್ ಅವರ ಜಾತಿ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ರದ್ದುಗೊಳಿಸಿದ್ದಾರೆ. ಇದು ಸುವರ್ಣ ಶಂಕರ್ ಅವರಿಗೆ ಆಘಾತ ಉಂಟು ಮಾಡಿದೆ. ಉಪ ವಿಭಾಗಾಧಿಕಾರಿ ಅವರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸುರ್ವಣ ಶಂಕರ್ ನಿರ್ಧರಿಸಿದ್ದಾರೆ.
ಉಪ ವಿಭಾಗಾಧಿಕಾರಿ ನಿರ್ಧಾರಕ್ಕೆ ಕಾರಣವೇನು?
ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಜಾತಿ ಪ್ರಮಾಣ ಪತ್ರ ಬೇಕು. ಈ ಪ್ರಮಾಣ ಪತ್ರ ಪಡೆಯಲು ಅಭ್ಯರ್ಥಿಯು ಆದಾಯ, ವೃತ್ತಿ ಮತ್ತು ಮಾರಾಟ ತೆರಿಗೆದಾರರಾಗಿರಬಾರದು. ಭೂ ಹಿಡುವಳಿ 8 ಹೆಕ್ಟೇರ್ ಮೀರಿರಬಾರದು ಎಂಬ ತಾಂತ್ರಿಕ ದೋಷ ಇಟ್ಟುಕೊಂಡು ಇಬ್ಬರ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ದೂರು ಸಲ್ಲಿಕೆಯಾಗಿದ್ದವು. ಇದನ್ನು ಪರಿಶೀಲಿಸಿ ಸುವರ್ಣ ಶಂಕರ್ ಅವರ ಪ್ರಮಾಣ ಪತ್ರ ರದ್ದುಗೊಳಿಸಲಾಗಿದೆ.

ಸುವರ್ಣ ಶಂಕರ್ ಪ್ರಮಾಣ ಪತ್ರ ರದ್ದು

ಸುವರ್ಣ ಶಂಕರ್ ಅವರು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಹಾಗಾಗಿ ಚುನಾವಣೆ ಸಂದರ್ಭ ಅವರಿಗೆ ಜಾತಿ ಪ್ರಮಾಣ ಪತ್ರದ ಅಗತ್ಯವಿರಲಿಲ್ಲ. ಮೇಯರ್ ಸ್ಥಾನದ ಚುನಾವಣಗೆ ಸ್ಪರ್ಧಿಸಲು ತಹಶೀಲ್ದಾರ್ ಅವರಿಂದ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಆದರೆ ಸುವರ್ಣ ಶಂಕರ್ ಅವರ ಕುಟುಂಬ ಈ ನಿಯಮದ ಅಡಿಗೆ ಬರುವುದರಿಂದ, ಅವರ ಪ್ರಮಾಣ ಪತ್ರವನ್ನು ಉಪವಿಭಾಗಾಧಿಕಾರಿ ರದ್ದುಗೊಳಿಸಿದ್ದಾರೆ.
ಅನಿತಾ ರವಿಶಂಕರ್’ಗೆ ಎದುರಾಗಿರುವ ಸಂಕಷ್ಟವೇನು?

ಮೇಯರ್ ಸ್ಥಾನದ ಮತ್ತೊಬ್ಬ ಪ್ರಬಲ ಆಕಾಂಕ್ಷಿ ಅನಿತಾ ರವಿಶಂಕರ್ ಅವರು ಬಿಸಿಎಂ ಬಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಆದರೆ ಅವರ ಕುಟುಂಬ ಕೂಡ ಆದಾಯ, ವೃತ್ತಿ ತೆರಿಗೆ ಪಾವತಿದಾರರಾಗಿದ್ದಾರೆ. ಹಾಗಾಗಿ ಅವರ ಪ್ರಮಾಣ ಪತ್ರವನ್ನು ರದ್ದುಗೊಳಿಸಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ. ಅದರೆ ಅನಿತಾ ರವಿಶಂಕರ್ ಅವರು ಈಗಾಗಲೇ ಚುನಾಯಿತರಾಗಿದ್ದಾರೆ. ಹಾಗಾಗಿ ಅವರ ಪ್ರಮಾಣ ಪತ್ರವನ್ನು ರದ್ದುಗೊಳಿಸುವ ಅಧಿಕಾರ ಉಪ ವಿಭಾಗಾಧಿಕಾರಿಗೆ ಇಲ್ಲ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾಗುತ್ತದೆ. ಒಂದು ವೇಳೆ ಈ ಕುರಿತು ಯಾರಾದರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ, ಅನಿತಾ ರವಿಶಂಕರ್ ಅವರ ಸದಸ್ಯತ್ವಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಧ್ಯ ಪ್ರವೇಶ ಮಾಡುತ್ತಾರಾ ವರಿಷ್ಠರು?
ಮೇಯರ್ ಆಕಾಂಕ್ಷಿಗಳಿಗೆ ಎದುರಾಗಿರುವ ಸಂಕಷ್ಟ ನಿವಾರಿಸಲು, ಈಗ ವರಿಷ್ಠರು ಮಧ್ಯಪ್ರವೇಶ ಮಾಡುವ ಸಾದ್ಯತೆ ಇದೆ. ಜ.29ಕ್ಕೆ ಮೇಯರ್ ಚುನಾವಣೆ ನಿಗದಿ ಆಗಿದೆ. ಹಾಗಾಗಿ ಇನ್ನೆರಡು ದಿನದಲ್ಲಿ ಈ ಸಂಕಷ್ಟ ನಿವಾರಿಸುವ ಸಲುವಾಗಿ ಸಭೆ ನಡೆಸುವ ಸಾದ್ಯತೆ ಇದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200