ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 MARCH 2021
ರಾಜಕೀಯದ ಕರ್ಮಭೂಮಿ ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿನಂದಿಸಲಾಯಿತು. ಜನ್ಮ ದಿನದ ಮರುದಿನ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿಎಂಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂತು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಬಿಎಸ್‌ವೈ ಅಭಿನಂದನಾ ಸಮಿತಿಯಿಂದ ನಮ್ಮೊಲುಮೆ’ ನಾಗರಿಕ ಸನ್ಮಾನ ಏರ್ಪಡಿಸಲಾಗಿತ್ತು. ಅಲಂಕೃತಗೊಂಡ ವೇದಿಕೆಯಲ್ಲಿ ಭವ್ಯ ಸಮಾರಂಭ ಆಯೋಜಿಸಲಾಗಿತ್ತು. ಬೆಳ್ಳಿ ಕಾಮಧೇನು ನೀಡಿ ಸಿಎಂಗೆ ಅಭಿನಂದನೆ ಸಲ್ಲಿಸಲಾಯಿತು.
ಯಡಿಯೂರಪ್ಪ ಅವರು ಬದುಕಿದ್ದೇ ಹೆಚ್ಚು
ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರು ಮಾತನಾಡಿ, ಯಡಿಯೂರಪ್ಪ ಅವರು ಪುರಸಭೆ ಅಧ್ಯಕ್ಷರಾಗಿದ್ದಾಗ ನಡೆದುಕೊಂಡೆ ಊರು ಸುತ್ತುತ್ತಿದ್ದರು. ಪ್ರತಿ ಕಡೆಗೂ ತೆರಳಿ ಸಮಸ್ಯೆ ಆಲಿಸುತ್ತಿದ್ದರು. ಒಮ್ಮೆ ಅವರು ನಡೆದುಕೊಂಡು ಹೋಗುತ್ತಿದ್ದಾಗ ಸೈಕಲ್‍ನಲ್ಲಿ ಬಂದವನೊಬ್ಬ ಯಡಿಯೂರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದ. ಯಡಿಯೂರಪ್ಪ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಗ ಅವರು ಬದುಕಿದ್ದೇ ಹೆಚ್ಚು. ಯಡಿಯೂರಪ್ಪ ಅವರಿಗೆ ಸವಾಲುಗಳೆಂದರೆ ಇಷ್ಟ. ಎಂತಹ ಸವಾಲುಗಳನ್ನು ಬೇಕಾದರೂ ಎದುರಿಸಲು ಅವರು ಸಿದ್ಧವಾಗಿರುತ್ತಾರೆ ಎಂದರು.
ರೈತಪರವಾಗಿ ಯೋಚಿಸುವಂತೆ ಮಾಡಿದರು
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ರಾಷ್ಟ್ರೀಯ ವಿಚಾರಗಳ ನಡುವೆ ರೈತರ ವಿಚಾರಗಳಿಗೆ ಮಹತ್ವ ನೀಡದ ಕಾಲದಲ್ಲಿ ಯಡಿಯೂರಪ್ಪ ಅವರು ಕೃಷಿಕರು, ಕಾರ್ಮಿಕರ ಬಗ್ಗೆ ಒತ್ತು ನೀಡಿದ್ದರು. ಅವರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಏರಿಸಿದ್ದರು. ತಮ್ಮ ಕಾರ್ಯವೈಖರಿಯಿಂದ ರಾಷ್ಟ್ರೀಯ ಪಕ್ಷಗಳು ಕೂಡ ರೈತ ಪರವಾಗಿ ಯೋಚಿಸುವಂತೆ ಮಾಡಿದ್ದಾರೆ ಎಂದರು.
ಜನರ ಅಪೇಕ್ಷೆಯಂತೆ ನಿರಂತರ ಕೆಲಸ
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊನೆಯ ಉಸಿರು ಇರುವವರೆಗೂ ರಾಜ್ಯದ, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಇಲ್ಲಿಯ ಜನರ ಪ್ರೀತಿ, ವಿಶ‍್ವಾಸಕ್ಕೆ ಚಿರಋಣಿಯಾಗಿರುವೆ. ಶಿವಮೊಗ್ಗಕ್ಕೆ ದೊಡ್ಡ ಕೈಗಾರಿಕೆಗಳು ಬರಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಜನರ ಅಪೇಕ್ಷೆಯಂತೆ ನಿರಂತರ ಕೆಲಸ ಮಾಡುವೆ. ರಾಜ್ಯದ ಪ್ರಗತಿಗಾಗಿ ಅಗತ್ಯ ಯೋಜನೆಗಳನ್ನು ರೂಪಸುತ್ತೇನೆ ಎಂದರು.
ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರು
ನಮ್ಮೊಲುಗೆ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಫ್ರೀಡಂ ಪಾರ್ಕ್ ಭರ್ತಿಯಾಗಿತ್ತು. ಯಡಿಯೂರಪ್ಪ ಪರವಾಗಿ ಘೊಷಣೆಗಳು ಮೊಳಗಿದವವು.
ತಡರಾತ್ರಿವರೆಗೂ ಸಂಗೀತ ಕಾರ್ಯಕ್ರಮ
ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಬಳಿಕ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿರುತೆರೆ ನಿರೂಪಕಿ ಅನುಶ್ರೀ ನಿರೂಪಣೆ ಮಾಡಿದರು. ರಾತ್ರಿ 11 ಗಂಟೆವರೆಗೂ ಸಿಎಂ ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ವೀಕ್ಷಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಆರ್‍ಎಸ್‍ಎಸ್ ಪ್ರಮುಖ ಪಟ್ಟಾಭಿರಾಮ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಸುಕುಮಾರ ಶೆಟ್ಟಿ, ಭಾರತಿ ಶೆಟ್ಟಿ, ಪ್ರಮುಖರಾದ ವಿಜಯೇಂದ್ರ, ನಟಿ ತಾರಾ, ನಟ ಜಗ್ಗೇಶ್, ಡಿ.ಎಸ್.ಅರುಣ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಇದ್ದರು.
VIDEO REPORT
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422