SHIVAMOGGA LIVE NEWS | 22 FEBRURARY 2023
SHIMOGA : ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಮತ್ತು ರೈಲ್ವೆ ನಿಲ್ದಾಣಕ್ಕೆ (Railway Station) ಕೆಳದಿ ಶಿವಪ್ಪನಾಯಕ ಅವರು ಹೆಸರು ಇಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ಈ ಮೊದಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಇಡಲು ಚರ್ಚೆ ನಡೆದಿತ್ತು. ಸಂಪುಟ ಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಸ್ವತಃ ಯಡಿಯೂರಪ್ಪ ಅವರೆ ತಮ್ಮ ಹೆಸರು ಇಡುವುದು ಬೇಡ ಎಂದು ನಿರಾಕರಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಲು ಸಲಹೆ ನೀಡಿದ್ದರು. ಈ ಸಲಹೆಗೆ ಮನ್ನಣೆ ನೀಡಿದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಕುವೆಂಪು ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿದೆ ಎಂದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?
ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ (Railway Station) ಕೆಳದಿ ಶಿವಪ್ಪನಾಯಕ ಅವರ ಹೆಸರು ಇಡಲು ಸಹ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಕುವೆಂಪು ಮತ್ತು ಕೆಳದಿ ಅರಸರು ಜಿಲ್ಲೆಯ ಎರಡು ಕಣ್ಣುಗಳಿದ್ದಂತೆ. ಶಿವಪ್ಪ ನಾಯಕರು ಶಿಸ್ತಿಗೆ ಹೆಸರಾದವರು. ಕಂದಾಯ ವ್ಯವಸ್ಥೆಯನ್ನು ಉತ್ತಮಗೊಳಿಸಿ ಉತ್ತಮ ಆಡಳಿತ ನೀಡಿದವರು. ಕುವೆಂಪು ರಾಷ್ಟ್ರ ಕವಿಗಳು. ವಿಶ್ವಮಾನವ ಪ್ರಜ್ಞೆ ಬೆಳೆಸಿದವರು. ಜ್ಞಾನದ ಶಿಖರವಾಗಿದ್ದಾರೆ. ಈ ಇಬ್ಬರ ಹೆಸರನ್ನು ಅಧಿಕೃತಗೊಳಿಸಿರುವುದು ಸ್ವಾಗತದ ವಿಷಯ. ಸಾಧಕರನ್ನ ಜಾತಿಗೆ ಸೀಮಿತಗೊಳಿಸದೆ ಈ ಹೆಸರು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದು ಸಾಮಾನ್ಯ ವಿಮಾನವಲ್ಲ, ‘ಇಂಡಿಯಾ 1’, ಇದರ ವಿಶೇಷತೆ ಏನು ಗೊತ್ತಾ?