SHIVAMOGGA LIVE NEWS | FARMER | 31 ಮೇ 2022
ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಉಚ್ಚಾಟಿಸಲಾಗಿದೆ.
ಶಿವಮೊಗ್ಗದ ರೈತ ಸಂಘ ಕಾರ್ಯಾಲಯದಲ್ಲಿ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈವರೆಗೂ ಸಂಘದ ಗೌರವಾಧ್ಯಕ್ಷರಾಗಿದ್ದ ಹೆಚ್.ಆರ್.ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಅವರು, ಇನ್ನು ಮುಂದೆ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹೊರಗಿಟ್ಟು ಸಂಘಟನೆ ಬಲಪಡಿಸುತ್ತೇವೆ. ಎಲ್ಲಾ ರೈತ ಸಂಘಗಳು ಒಂದಾಗಿ ಮಾತುಕತೆಗೆ ಬಂದಲ್ಲಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸುತ್ತೇನೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ರೈತ ಸಂಘದ ಪದಾಧಿಕಾರಿ ಭ್ರಷ್ಟತನ ಬಯಲಾಗಿದೆ. ಹಸಿರು ಟವೆಲ್ ಹಾಕಿಕೊಂಡು ಓಡಾಡುವುದು ಕಷ್ಟವಾಗಿದೆ ಎನ್ನುವಂತಹ ಪರಿಸ್ಥಿತಿ ಇದೆ. ನಿನ್ನೆ ಕೆಲವು ಕಾರ್ಯಕರ್ತರು ಟವೆಲ್ ಬೈಕ್ ನಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದಾರೆ. ಇದೆಲ್ಲಾ ಬೆಂಗಳೂರಲ್ಲಿ ಕುಳಿತವರಿಗೆ ಅರ್ಥವಾಗಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ನಮ್ಮ ಸಂಘಟನೆ ಇದುವರೆಗೆ ರಾಜ್ಯಮಟ್ಟದ ಸದಸ್ಯರಿಗೆ ವಾಟ್ಸಾಪ್ ನಲ್ಲೇ ಮೆಮೋ ಹಾಕಿ ಮೀಟಿಂಗ್ ಕರೆಯಲಾಗುತ್ತದೆ. ಅದೇ ರೀತಿ ನಾನೇ ಮೀಟಿಂಗ್ ಕರೆದಿದ್ದೆ, ಆ ಸಭೆಗೆ ಯಾರೂ ಹೋಗದಂತೆ ಹೇಳಲಾಗಿತ್ತು. 18 ಜಿಲ್ಲೆಗಳ ಪದಾಧಿಕಾರಿಗಳು, ಶೇ.75 ರಷ್ಟು ಮಂದಿ ಬಂದಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಶಶಿಕಾಂತ್ ಪಡಸಲಗಿ, ಸಿದ್ಧವೀರಪ್ಪ, ಕುರುವ ಗಣೇಶ್, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ಧವೀರಪ್ಪ, ಸುಭಾಷ್, ಬಸವನಗೌಡ ಪಾಟೀಲ್, ದುಗ್ಗಪ್ಪಗೌಡ, ಅಗ್ನಿ ಶಿವಪ್ಪ ಮೊದಲಾದವರಿದ್ದರು.
ಇದನ್ನೂ ಓದಿ – ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸಾದ ಶಿವಮೊಗ್ಗದ ವೈದ್ಯ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.