ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 9 ಜನವರಿ 2022
ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಬಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜನ ರೊಚ್ಚಿಗೇಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್’ನಲ್ಲಿ ಇವತ್ತು ಘಟನೆ ಸಂಭವಿಸಿದೆ.
ಕರೋನ ಮೂರನೆ ಅಲೆ, ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಫೈನ್ ಪುನಾರಂಭ ಮಾಡಿದ್ದಾರೆ. ನಗರದ ಪ್ರಮುಖ ಕಡೆಗಳಲ್ಲಿ ಮಾಸ್ಕ್ ಧರಿಸಿದವರನ್ನು ತಡೆದು, ದಂಡ ವಿಧಿಸುತ್ತಿದ್ದಾರೆ. ಇವತ್ತು ಗಾಂಧಿ ಬಜಾರ್’ನಲ್ಲಿ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಲು ತೆರಳಿದ್ದಾಗ, ಜನ ತಿರುಗಿ ಬಿದ್ದಿದ್ದಾರೆ.
ಮಾಸ್ಕ್ ಫೈನ್ ಸಂಗ್ರಹ
ಪಾಲಿಕೆ ಅಧಿಕಾರಿಗಳ ತಂಡ ಗಾಂಧಿ ಬಜಾರ್’ನಲ್ಲಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿತ್ತು. ತರಕಾರಿ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರನ್ನು ತಡೆದು ಮಾಸ್ಕ್ ಧರಿಸದ್ದಕ್ಕೆ ದಂಡ ವಸೂಲಿಗೆ ನಿಂತಿದ್ದರು. ಈ ವೇಳೆ ಆತ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ. ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲು ಆರಂಭಿಸಿದ.
‘ತರಕಾರಿ ತರಲು ನೂರಿನ್ನೂರು ರುಪಾಯಿ ತಂದಿರುತ್ತೇವೆ. ಅದನ್ನೂ ಇವರು ಕಿತ್ತುಕೊಂಡು ಹೋದರೆ ನಾವೇನು ಮಾಡಬೇಕು. ರಾಜಕಾರಣಿಗಳೆಲ್ಲ ಆರಾಮಾಗಿ ಓಡಿಕೊಂಡಿದ್ದಾರೆ. ಅವರಿಗೆ ದಂಡ ಹಾಕಿ’ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗುಂಪುಗೂಡಿದ ಜನರು
ಪಾಲಿಕೆ ಅಧಿಕಾರಿಗಳು ಮತ್ತು ತರಕಾರಿ ಕೊಳ್ಳಲು ಬಂದಿದ್ದ ವ್ಯಕ್ತಿ ನಡುವಿನ ಮಾತಿನ ಚಕಮಕಿ ಹಿನ್ನೆಲೆ, ಜನ ಸೇರಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಆಮ್ ಆದ್ಮಿ ಪಕ್ಷದ ಮುಖಂಡ ಮನೋಹರ ಗೌಡ, ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಬಡ ಜನರು ಮಾಸ್ಕ್ ಹಾಕದಿದ್ದರೆ ದಂಡ ಹಾಕುತ್ತೀರಲ್ಲ. ಪ್ರಥಮ ಪ್ರಜೆ ಕರೋನ ಬಂದ ವಿಚಾರದಲ್ಲಿ ದೂರು ಕೊಟ್ಟಿದ್ದೇವೆ. ಏನು ಕ್ರಮ ಕೈಗೊಂಡಿದ್ದೀರ. ಅವರಿಗೊಂದು ಕಾನೂನು ಜನ ಸಾಮಾನ್ಯರಿಗೊಂದು ಕಾನೂನು ಇದೆಯಾ?’ ಎಂದು ಪ್ರಶ್ನಿಸಿದರು. ಅದಲ್ಲದೆ ಮಾಸ್ಕ್ ಧರಿಸದೆ ಬಂದಿದ್ದ ವ್ಯಕ್ತಿಗೆ ಮಾಸ್ಕ್ ಹಾಕಿಕೊಂಡು ಬರುವಂತೆ ಸಲಹೆ ನೀಡಿ ಕಳುಹಿಸಿದರು.
ಸೈಲೆಂಟಾಗಿ ಕಾಲ್ಕಿತ್ತರು ಪಾಲಿಕೆ ಅಧಿಕಾರಿಗಳು
ಇನ್ನು, ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸೈಲೆಂಟಾಗಿ ಕಾಲ್ಕಿತ್ತರು. ತರಕಾರಿ ಮಾರುಕಟ್ಟೆ ಬಳಿ ನಿಲ್ಲುವ ಬದಲು ರಾಮಣ್ಣ ಶ್ರೇಷ್ಠಿ ಪಾರ್ಕ್ ಕಡೆಗೆ ನಡೆದು ಹೋದರು. ಮಹಾನಗರ ಪಾಲಿಕೆಯ ನಾಲ್ವರು ಅಧಿಕಾರಿಗಳ ತಂಡ ಇವತ್ತು ಗಾಂಧಿ ಬಜಾರ್’ನಲ್ಲಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422