ಶಿವಮೊಗ್ಗದ ಲೈವ್.ಕಾಂ | SHIMOGA NEWS | 1 ಫೆಬ್ರವರಿ 2022
ಕಣ್ಣು ಕಾಣದ ಯುವಕನೊಬ್ಬ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡ ಬಳಿಕ ಸ್ಮಾರ್ಟ್ ಸಿಟಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಾಲರಾಜ ಅರಸ್ ರಸ್ತೆಯಲ್ಲಿ ತೋಡಿದ್ದ ಗುಂಡಿಯ ಸುತ್ತಲು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಇಮಾಮ್ ಸಾಬ್ ಇನಾಂದಾರ್ (38) ಎಂಬುವವರು ಹುಟ್ಟಿನಿಂದ ಅಂಧರು. ಶಿವಮೊಗ್ಗ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಇವರು, ಅಲ್ಲಿಂದ ತಮ್ಮ ಹಾಸ್ಟೆಲ್’ಗೆ ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ದಿಢೀರ್ ಗುಂಡಿ ತೋಡಿದ್ದು, ಬ್ಯಾರಿಕೇಡ್ ಅಳವಡಿಸಿರಲಿಲ್ಲ. ನಿತ್ಯ ಓಡಾಡುವ ರಸ್ತೆಯಲ್ಲಿ ಗುಂಡಿ ತೋಡಿರುವುದು ಗೊತ್ತಾಗದೆ ಇಮಾಮ್ ಸಾಬ್ ಇನಾಂದಾರ್ ಬಿದ್ದು, ಕಾಲು ಮುರಿದುಕೊಂಡಿದ್ದರು.
ಹಿಡಿಶಾಪದ ಬಳಿಕ ಬಂತು ಬ್ಯಾರಿಕೇಡ್
ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಅಸಡ್ಡೆಯಿಂದಾಗಿ ಇಮಾಮ್ ಸಾಬ್ ಇನಾಂದಾರ್ ಆಸ್ಪತ್ರೆ ಸೇರಿದ್ದಾರೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ಜನವರಿ 31ರಂದು ಕಣ್ಣು ಕಾಣದ ವ್ಯಕ್ತಿಯ ಕಾಲು ಮುರಿದ ಶಿವಮೊಗ್ಗ ಸ್ಮಾರ್ಟ್ ಸಿಟಿ ಗುಂಡಿ ಎಂದು ವಿಸ್ತೃತ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಹಲವರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇಮಾಮ್ ಸಾಬ್ ಇನಾಂದಾರ್ ಹೇಗಿದಾರೆ?
ಇತ್ತ, ಕಾಲು ಮುರಿದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಮಾಮ್ ಸಾಬ್ ಇನಾಂದಾರ್ ಅವರು ಡಿಸ್ಚಾರ್ಜ್ ಆಗಿದ್ದಾರೆ. ತಮ್ಮ ತವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮನೆಗೆ ಮರಳಿದ್ದಾರೆ. ‘ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಕೆಲವು ದಿನದ ಬಳಿಕ ಚಿಕಿತ್ಸೆಗೆ ಬರುವಂತೆ ವೈದ್ಯರು ತಿಳಿಸಿದ್ದಾರೆ. ಆಗ ಬರಬೇಕಿದೆ’ ಎಂದು ಇಮಾಮ್ ಸಾಬ್ ಇನಾಂದಾರ್ ಶಿವಮೊಗ್ಗ ಲೈವ್.ಕಾಂಗೆ ತಿಳಿಸಿದ್ದಾರೆ.
ಮಾನವೀಯತೆ ಮರೆತ ಅಧಿಕಾರಿಗಳು
ಅಂಧರೊಬ್ಬರು ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಶಿವಮೊಗ್ಗದ ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಸಂಭವಿಸಿ ಒಂದು ವಾರ ಕಳೆದಿದೆ. ಇಷ್ಟಾದರೂ ಅಧಿಕಾರಿಗಳ್ಯಾರೂ ಇಮಾಮ್ ಸಾಬ್ ಇನಾಂದಾರ್ ಆರೋಗ್ಯ ವಿಚಾರಿಸಿಲ್ಲ. ಮಾನವೀಯತೆ ದೃಷ್ಟಿಯಿಂದಲೂ ಅವರನ್ನು ಸಂಪರ್ಕ ಮಾಡಿಲ್ಲ.
‘ಈತನಕ ಯಾರೊಬ್ಬರು ನಮ್ಮನ್ನು ಸಂಪರ್ಕಿಸಿಲ್ಲ. ದೂರು ನೀಡುವಾಗ ಪೊಲೀಸರು ಬಂದು ಹೋಗಿದ್ದರು. ಮಾಧ್ಯಮದವರು ಬಂದು ಆರೋಗ್ಯ ವಿಚಾರಿಸಿದರು. ಆದರೆ ಸ್ಮಾರ್ಟ್ ಸಿಟಿ ಅಧಿಕಾರಿಗಳ್ಯಾರು ತಮ್ಮನ್ನು ಸಂಪರ್ಕ ಮಾಡಿಲ್ಲ’ ಎಂದು ನೋವಿನಿಂದಲೇ ಹೇಳುತ್ತಾರೆ ಇಮಾಮ್ ಸಾಬ್ ಇನಾಂದಾರ್.
ಬಿಲ್ ಕಟ್ಟಲು ನೆರವಾದ ಸ್ನೇಹಿತರು
ಇಮಾಮ್ ಸಾಬ್ ಇನಾಂದಾರ್ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಸಂದರ್ಭ ಅವರು ಕಾಲು ಮುರಿದುಕೊಂಡು ಮಲಗಿದ್ದಾರೆ. ಇದು ಅವರ ಕುಟುಂಬಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ಇವರ ಪರಿಸ್ಥಿತಿಯ ಅರಿವಿರುವ ಕೆಲವು ಸ್ನೇಹಿತರು, ಹಿತೈಷಿಗಳು, ಇಮಾಮ್ ಸಾಬ್ ಇನಾಂದಾರ್ ಅವರ ಆಸ್ಪತ್ರೆ ಬಿಲ್ ಭರಿಸಲು ನೆರವಾಗಿದ್ದಾರೆ. ಈಗ ಪುನಃ ಆಸ್ಪತ್ರೆ ಖರ್ಚು, ಮನೆ ನಿರ್ವಹಣೆ ಹೇಗೆ ಎಂಬುದು ಇಮಾಮ್ ಸಾಬ್ ಇನಾಂದಾರ್ ಅವರು ಕೊರಗಾಗಿದೆ.
ಇಮಾಮ್ ಸಾಬ್ ಇನಾಂದಾರ್ ಅವರಿಗೆ ನೆರವಾಗಲು ಬಯಸುವವರು ಅವರ ಮೊಬೈಲ್ ನಂಬರ್ 7338123472 ಗೆ ಕರೆ ಮಾಡಬಹುದಾಗಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200