SHIVAMOGGA LIVE NEWS | PROTEST | 31 ಮೇ 2022
ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಯುದ್ಧವೀರ ಸಿಂಗ್ ಅವರಿಗೆ ಕಪ್ಪು ಮಸಿ ಬಳಿದು, ಹಲ್ಲೆ ನಡೆಸಿದ್ದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ವಿವಿಧ ಸಂಘಟನೆಗಳು ಇವತ್ತು ಬೀದಿಗಿಳಿದು ಹೋರಾಟ ನಡೆಸಿದವು.
ರೈತ ಸಂಘದ ಆಕ್ರೋಶ
ಹಲ್ಲೆ ಮಾಡಿದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ರೈತ ಸಂಘದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪದಾಧಿಕಾರಿಗಳಾದ ಸಿದ್ಧವೀರಪ್ಪ, ಕುರುವ ಗಣೇಶ್, ಡಾ. ಚಿಕ್ಕಸ್ವಾಮಿ, ಮೊಹಮ್ಮದ್ ನಜೀರ್ ಸಾಬ್, ಮೂಲಮನಿ, ಚುನ್ನಪ್ಪ ಪೂಜಾರಿ ಮೊದಲಾದವರಿದ್ದರು.
ರೈತ ಸಂಘದ ಜಿಲ್ಲಾ ಘಟಕ ಅಕ್ರೋಶ
ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲಾಯಿತು. ರಾಜ್ಯ ರೈತ ಚಳುವಳಿ ಆತ್ಮಾವಲೋಕನ – ಸ್ಪಷ್ಟೀಕರಣ ಸಭೆಯಲ್ಲಿ ಏಕಾಏಕಿ ನುಗ್ಗಿದ ಕೆಲವು ಕಿಡಿಗೇಡಿಗಳು ರಾಕೇಶ್ ಟಿಕಾಯತ್ ಮತ್ತು ಯುದ್ಧವೀರ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಕಪ್ಪು ಮಸಿ ಎರಚಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಜಯಪ್ಪ ಗೌಡ, ಕಾರ್ಯದರ್ಶಿ ಡಿ.ವಿ. ವೀರೇಶ್, ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ ಮೊದಲಾದವರಿದ್ದರು.
ರೈತ ಮಹಾ ಪಂಚಾಯತ್ ಖಂಡನೆ
ರಾಕೇಶ್ ಟಿಕಾಯತ್ ಮತ್ತು ಜೊತೆಗಿದ್ದ ರೈತ ಹೋರಾಟಗಾರರ ಮೇಲೆ ಆರ್.ಎಸ್.ಎಸ್ ಹಲ್ಲೆಕೋರರು ಮಸಿ ಎರಚಿ ದಾಳಿ ನಡೆಸಿದ್ದಾರೆ. ದಾಳಿಕೋರರನ್ನು ಕೂಡಲೇ ಬಂಧಿಸಿ, ಈ ಗಂಭೀರ ಅಪರಾಧಕ್ಕೆ ಕಠಿಣವಾದ ಪ್ರಕರಣವನ್ನು ಅವರ ಮೇಲೆ ದಾಖಲಿಸಬೇಕು ಎಂದು ರೈತ ಮಹಾ ಪಂಚಾಯತ್ ಆಗ್ರಹಿಸಿದೆ. ಕೆ.ಟಿ.ಗಂಗಾಧರ್, ಹೆಚ್.ಆರ್.ಬಸವರಾಜಪ್ಪ, ಎಂ.ಶ್ರೀಕಾಂತ್, ಕೆ.ಎಲ್. ಅಶೋಕ್, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಹಾಲೇಶಪ್ಪ, ಎಂ.ರಮೇಶ್, ಹೆಚ್.ಸಿ.ಯೋಗೇಶ್ ಅವರು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಎಸ್.ಡಿ.ಪಿ.ಐ ಸಂಘಟನೆಯಿಂದ ಖಂಡನೆ
ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ಹಲ್ಲೆಯನ್ನು ಎಸ್.ಡಿ.ಪಿ.ಐ ಸಂಘಟನೆ ಖಂಡಿಸಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಎಸ್.ಡಿ.ಪಿ.ಐ ಕಾರ್ಯಕರ್ತರು, ಹಲ್ಲೆಕೋರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ – ‘ಪ್ರತಿ ಲೀಟರ್ ಪೆಟ್ರೋಲ್ 36 ರೂ.ಗೆ ಇಳಿಯಬೇಕಿತ್ತು’, ಕೇಂದ್ರದ ವಿರುದ್ಧ ಶಿವಮೊಗ್ಗದಲ್ಲಿ ಆಕ್ರೋಶ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.