SHIVAMOGGA LIVE NEWS | 14 ಮಾರ್ಚ್ 2022
ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ನಲ್ಲಿನ ಸಮಸ್ಯೆ ಖಂಡಿಸಿ ಇವತ್ತು ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ನಡೆಸಿದರು. ಕಾಲೇಜು ಮುಂಭಾಗ ಧರಣಿ ಕುಳಿತ ವಿದ್ಯಾರ್ಥಿನಿಯರು, ತಕ್ಷಣಕ್ಕೆ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟು ಹಿಡಿದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200
ಕಳೆದ ವಾರ ಸಹ್ಯಾದ್ರಿ ಕಾಲೇಜಿನ 12 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಹೊಟ್ಟನೋವು, ವಾಂತಿಯಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಲೇಜು ವತಿಯಿಂದ ಆಸ್ಪತ್ರೆಯ ಖರ್ಚು ಭರಿಸಲಾಗಿತ್ತು. ಈಗ ಹಣ ಹಿಂತಿರುಗಿಸುವಂತೆ ತಿಳಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ವಿದ್ಯಾರ್ಥಿನಿಯರ ಆಗ್ರಹವೇನು?
ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ನಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಪರೀಕ್ಷೆ ಸೇರಿದಂತೆ ವಿವಿಧ ಕಾರಣಕ್ಕೆ ಕಾಲೇಜಿಗೆ ಬರುವ ಅತಿಥಿಗಳಿಗೆ ಹಾಸ್ಟೆಲ್’ನಿಂದ ಊಟ ಸರಬರಾಜು ಮಾಡುತ್ತಾರೆ. ಅದರ ಹೊರೆಯನ್ನು ವಿದ್ಯಾರ್ಥಿನಿಯರ ಮೇಲೆ ಹೊರಿಸಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.
ಹಾಸ್ಟೆಲ್’ನಲ್ಲಿ ಶೌಚಾಲಯ ಶುಚಿಯಾಗಿಲ್ಲ. ಅಡುಗೆ ಮನೆಯಲ್ಲೂ ಶುಚಿತ್ವ ಕಾಯ್ದುಕೊಂಡಿಲ್ಲ. ಸೆಕ್ಯೂರಿಟಿಗಳು ಮದ್ಯಪಾನ ಮಾಡಿ ಬರುತ್ತಾರೆ ಎಂದು ಆರೋಪಿಸಿದರು.
ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್’ನಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಕೂಡಲೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್ ಆಡಳಿತದ ವಿರುದ್ಧ ಆಕ್ರೋಶ
ತರಗತಿ ಆರಂಭವಾಗುವ ಹೊತ್ತಿಗೆ ಸಹ್ಯಾದ್ರಿ ಕಾಲೇಜು ಮುಂಭಾಗ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಕಾಲೇಜು ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಸ್ಟೆಲ್ ಅವ್ಯವಸ್ಥೆಯನ್ನು ಕೂಡಲೆ ಪರಿಹರಿಸಬೇಕು ಎಂದು ವಿದ್ಯಾರ್ಥಿನಿಯರ ಆಗ್ರಹಿಸಿದರು. ಅಲ್ಲದೆ ಕುಲಪತಿ ಅವರು ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಪಟ್ಟು ಹಿಡಿದರು.
ಕಾಲೇಜು ಪ್ರಾಂಶುಪಾಲರು ಹೇಳಿದ್ದೇನು?
ಮಾಧ್ಯಮಗಳ ಜೊತೆಗೆ ಮಾತನಾಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ವಾಗ್ದೇವಿ ಅವರು, ಮೂರು ದಿನದ ಹಿಂದೆ 20 ವಿದ್ಯಾರ್ಥಿನಿಯರಿಗೆ ಸಂಜೆ ವಾಂತಿಯಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. 11 ವಿದ್ಯಾರ್ಥಿನಿಯರ ಹೊರತು ಉಳಿದವರಿಗೆ ಚಿಕಿತ್ಸೆ ನೀಡಿ ಹಿಂದಕ್ಕೆ ಕಳುಹಿಸಿದರು. ಉಳಿದವರನ್ನು ರಾತ್ರಿ ಆಸ್ಪತ್ರೆಯಲ್ಲೆ ದಾಖಲು ಮಾಡಿಕೊಳ್ಳಲಾಯಿತು. ಮರುದಿನ ಅವರು ಡಿಸ್ಚಾರ್ಜ್ ಆದರು ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ವಾಂತಿ ಮಾಡಿ ಹಾಗೆ ಬಿಟ್ಟು ಹೋಗಿದ್ದರು. ಅದನ್ನು ಸ್ವಚ್ಛ ಮಾಡಿರಲಿಲ್ಲ. ಶುಚಿಗೊಳಿಸುವ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಆಗ ವಿದ್ಯಾರ್ಥಿಯರು ಫ್ರೈಡ್ ರೈಸ್, ಚಿಕನ್ ಸೇವಿಸಿರುವುದು ಗೊತ್ತಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
ಇನ್ನು, ವಿಚಾರ ತಿಳಿದು ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಹಾಸ್ಟೆಲ್’ಗೆ ಭೇಟಿ ನೀಡಿದ್ದರು. ಆ ದಿನ ಮಾಡಿದ್ದ ಪಾಯಸ, ಮಜ್ಜಿಗೆಯನ್ನು ಪರಿಶೀಲಿಸಿದರು. ತಾವು ಕೂಡ ಸೇವಿಸಿದರು. ಕುಡಿಯುವ ನೀರಿನ ಕುರಿತು ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆ ವೆಚ್ಚವನ್ನು ಭರಿಸುವುದು ಹೇಗೆ ಅನ್ನುವ ಕುರಿತು ಕೇಳಿದ್ದು ನಿಜ ಎಂದು ತಿಳಿಸಿದರು.
600 ವಿದ್ಯಾರ್ಥಿನಿಯರು ಇದ್ದಾರೆ
ಇನ್ನು, ಹಾಸ್ಟೆಲ್’ನಲ್ಲಿ ಸುಮಾರು 600 ವಿದ್ಯಾರ್ಥಿನಿಯರಿದ್ದಾರೆ. ಆಹಾರದಲ್ಲಿ ತೊಂದರೆ ಉಂಟಾಗಿದ್ದರೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿತ್ತು. ಹಾಸ್ಟೆಲ್’ನಲ್ಲಿ ಇರುವವರೆಲ್ಲ ನಮ್ಮ ವಿದ್ಯಾರ್ಥಿನಿಯರೆ. ಎಲ್ಲರೊಂದಿಗೂ ಚರ್ಚೆ ನಡೆಸಿ ಮುಂದಿನ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರಾಂಶುಪಾಲೆ ವಾಗ್ದೇವಿ ಅವರು ತಿಳಿಸಿದರು.
ಹೋರಾಟಕ್ಕೆ ಸಂಘಟನೆಗಳ ಬಲ
ಮತ್ತೊಂದೆಡೆ ವಿದ್ಯಾರ್ಥಿನಿಯರ ಹೋರಾಟಕ್ಕೆ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ಸೂಚಿಸಿವೆ. ಎಬಿವಿಪಿ ವಿದ್ಯಾರ್ಥಿ ಸಂಘಟನೆ ಬೆಂಬಲ ವ್ಯಕ್ತಪಡಿಸಿದ್ದು, ಹಾಸ್ಟೆಲ್ ಊಟದಿಂದ ಸಮಸ್ಯೆ ಉಂಟಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ, ಸಹ್ಯಾದ್ರಿ ಕಾಲೇಜು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದೆ.
ಇನ್ನು, NSUI ವಿದ್ಯಾರ್ಥಿ ಸಂಘಟನೆ ಕೂಡ ವಿದ್ಯಾರ್ಥಿನಿಯರ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಲಯದ ಅವ್ಯವಸ್ಥೆಯನ್ನು ಕೂಡಲೆ ಸರಿಪಡಿಸಬೇಕು ಎಂದು ಸಂಘಟನೆ ಆರೋಪಿಸಿದೆ.
ಹಾಸ್ಟೆಲ್’ನಲ್ಲಿ ವಿಷಾಹಾರ ಸೇವಿಸಲಾಗಿದೆ ಎನ್ನಲಾಗಿರುವ ಪ್ರಕರಣ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈಗಾಗಲೆ ಹಿಜಾಬ್ ವಿವಾದ, ವಾಟ್ಸಪ್’ನಲ್ಲಿ ಪಾಕಿಸ್ತಾನ ಧ್ವಜದ ಸ್ಟಿಕರ್ ಪೋಸ್ಟ್ ಮಾಡಿರುವ ವಿವಾದದಿಂದಾಗಿ ಕಾಲೇಜಿನಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈಗ ಆಹಾರ ವಿವಾದ ಕಾಲೇಜು ಆಡಳಿತ ಮಂಡಳಿಗೆ ಹೊಸ ತಲೆನೋವು ಸೃಷ್ಟಿ ಮಾಡಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200