ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಸೆಪ್ಟೆಂಬರ್ 2021
ಕ್ಯಾಂಪಸ್ ಒಳಗೆ ಖೇಲೋ ಇಂಡಿಯಾ ಯೋಜನೆ ವಿರೋಧಿಸಿ ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರ ಸ್ವರೂಪ ಪಡೆಯುತ್ತಿದೆ. ಇವತ್ತು ಸಹ್ಯಾದ್ರಿ ಕಾಲೇಜು ಮುಂಭಾಗ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಅಲ್ಲದೆ ಕುವೆಂಪು ವಿಶ್ವವಿದ್ಯಾಲಯದ ನಗರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಖೇಲೋ ಇಂಡಿಯಾ ಯೋಜನೆ ಅಡಿ ವಿಶೇಷ ಕ್ರೀಡಾ ಸಂಕೀರ್ಣ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಹ್ಯಾದ್ರಿ ಕಾಲೇಜು ಕ್ಯಾಂಪಸ್’ನಲ್ಲಿ ಈ ಕ್ರೀಡಾ ಸಂಕೀರ್ಣಕ್ಕೆ ಜಾಗ ನಿಗದಿಪಡಿಸಲಾಗಿದೆ. ಆದರೆ ವಿದ್ಯಾರ್ಥಿಗಳು, ವಿವಿಧ ಸಂಘ, ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಒಳಗೆ ಈ ಸಂಕೀರ್ಣ ಸ್ಥಾಪಿಸುವುದು ಬೇಡ ಎಂದು ಆಗ್ರಹಿಸಿದ್ದಾರೆ.
MRS ಸರ್ಕಲ್’ನಲ್ಲಿ ರಸ್ತೆ ತಡೆ
ಇವತ್ತು ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ರಸ್ತೆ ತಡೆ ನಡೆಸಿದರು. ಕಾಲೇಜು ಮುಂಭಾಗದ MRS ಸರ್ಕಲ್’ನಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ಮಾಡಿದರು. ಅಲ್ಲದೆ ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕ್ರೀಡಾ ಸಂಕೀರ್ಣವನ್ನು ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಬದಲು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಹೈವೇ ರಸ್ತೆಯಲ್ಲಿ ಮೆರವಣಿಗೆ
ಕೆಲ ಹೊತ್ತು ರಸ್ತೆ ತಡೆ ನಡೆಸಿದ ವಿದ್ಯಾರ್ಥಿಗಳು ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಕ್ರೀಡಾ ಸಂಕೀರ್ಣವನ್ನು ಸಹ್ಯಾದ್ರಿ ಕಾಲೇಜು ಕ್ಯಾಂಪಸ್’ನಿಂದ ಹೊರಗೆ ಸ್ಥಾಪಿಸುವಂತೆ ಘೋಷಣೆಗಳನ್ನು ಕೂಗಿದರು. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
ನಗರ ಕಚೇರಿಗೆ ಮುತ್ತಿಗೆ ಯತ್ನ
ಬೈಪಾಸ್ ರಸ್ತೆಯಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ನಗರ ಕಚೇರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಕಚೇರಿಯ ಗೇಟ್ ಬಂದ್ ಮಾಡಿಸಿದರು. ವಿದ್ಯಾರ್ಥಿಗಳು ಒಳಗೆ ಪ್ರವೇಶ ಪಡೆಯದಂತೆ ತಡೆದರು. ಕೆಲವರು ಗೇಟು ಹಾರಿ ಒಳಗೆ ನುಗ್ಗಲು ಯತ್ನಿಸಿದರು. ಇದರಿಂದ ಕೆಲ ಕ್ಷಣ ನಗರ ಕಚೇರಿ ಮುಂಭಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತಳ್ಳಾಟವಾಯಿತು.
72 ಕೋಟಿ ರೂ. ವೆಚ್ಚದ ಕ್ರೀಡಾ ಸಂಕೀರ್ಣ
ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನಲ್ಲಿ ವಿಶೇಷ ಕ್ರೀಡಾ ಸಂಕೀರ್ಣ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 72 ಕೋಟಿ ರೂ. ವೆಚ್ಚದಲ್ಲಿ ಖೇಲೋ ಇಂಡಿಯಾ ಯೋಜನೆ ಅಡಿ ಈ ಸಂಕೀರ್ಣ ನಿರ್ಮಿಸಲಾಗುತ್ತಿದೆ. ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಇಲ್ಲಿ ತರಬೇತಿ ಕೊಡಲಾಗುತ್ತದೆ. 17 ಎಕರೆ ಪ್ರದೇಶದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗೆ ಅನುಕೂಲ ಆಗುವಂತಹ ಅಂಗಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಸಹ್ಯಾದ್ರಿ ಕಾಲೇಜು ಕ್ಯಾಂಪಸ್’ನಲ್ಲಿ ಈಗಾಗಲೆ ಸ್ಟೇಡಿಯಂ ಇದೆ. ಶೈಕ್ಷಣಿಕ ಚುಟುವಟಿಕೆಗೆ ಅನುಕೂಲ ಆಗುವ ಮೂಲ ಸೌಕರ್ಯದ ಅವಶ್ಯಕತೆ ಇದೆ. ಇವುಗಳನ್ನು ಸ್ಥಾಪಿಸುವತ್ತ ಸರ್ಕಾರ ಗಮನ ಹರಿಸಬೇಕು. ಕ್ರೀಡಾ ಸಂಕೀರ್ಣ ಸ್ಥಾಪನೆಯಾದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಕ್ರೀಡಾ ಸಂಕೀರ್ಣವನ್ನು ಆಯನೂರಿನಲ್ಲಿ ಖಾಲಿ ಇರುವ 50 ಎಕರೆ ಜಾಗದಲ್ಲಿ ಸ್ಥಾಪಿಸಬೇಕು ಎಂದು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಒತ್ತಾಯವಾಗಿದೆ.
ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಎಲ್ಲ ಕಾಮಗಾರಿಗಳಿಗೆ ಎಲ್ಲರೂ ಬೆಂಬಲ ನೀಡುತ್ತಾರೆ ಎಂದು ಹೇಳಲಾಗುವುದಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡಿದೆ. ರಾಜ್ಯ ಸರ್ಕಾರವೂ ಅನುದಾನ ನೀಡಲಿದೆ. ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಂಸದ ರಾಘವೇಂದ್ರ ಈ ಯೋಜನೆ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಎಲ್ಲರ ಒಪ್ಪಿಗೆ ಪಡೆದು ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಖೇಲೋ ಇಂಡಿಯಾ ಕ್ರೀಡಾ ಸಂಕೀರ್ಣ ವಿರೋಧಿಸಿ ವಿದ್ಯಾರ್ಥಿಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರು ಜಿಲ್ಲಾಡಳಿತವನ್ನು ಚಿಂತೆಗೀಡು ಮಾಡಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200