ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಡಿಸೆಂಬರ್ 2021
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್’ನಲ್ಲಿ ತಾಂತ್ರಿಕ ಪರಿಶೀಲನೆ ಮತ್ತು ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಮುನ್ಸೂಚನೆ ನೀಡದೆ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸಾವರರು ಸಂಕಷ್ಟಕ್ಕೀಡಾದರು.
ಏನೇನು ಕಾಮಗಾರಿ ನಡೆಯುತ್ತಿದೆ?
ರೈಲ್ವೆ ಗೇಟ್ ಬಂದ್ ಮಾಡಲಾಗಿದೆ. ಲೆವೆಲ್ ಕ್ರಾಸಿಂಗ್’ನಲ್ಲಿ ಹಳಿಗಳ ರಿಪೇರಿ ಕಾಮಗಾರಿ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆ ಕಾರ್ಮಿಕರು ಬೆಳಗ್ಗೆಯಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಹಳಿಗಳ ನಡುವೆ ಇದ್ದ ಜೆಲ್ಲಿಯನ್ನು ತೆಗೆದು ರಿಪೇರಿ ಕಾಮಗಾರಿ ನಡೆಸಲಾಗುತ್ತಿದೆ.
ವಾಹನ ಸಂಚಾರ ಸಂಪೂರ್ಣ ಬಂದ್
ಕಾಮಗಾರಿ ನಡೆಯುತ್ತಿರುವುದರಿಂದ ಸವಳಂಗ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಸವಳಂಗ ರಸ್ತೆಯ ಉಷಾ ನರ್ಸಿಂಗ್ ಹೋಂ ಮುಂಭಾಗ ಬ್ಯಾರಿಕೇಡ್ ಹಾಕಲಾಗಿದೆ. ವಾಹನ ಸಂಚಾರ ಬಂದ್ ಮಾಡಲಾಗಿದೆ. ಇನ್ನು, ನವುಲೆ ಮಾರ್ಗದಿಂದ ಬರುವ ವಾಹನಗಳಿಗೆ ವಸುಂಧರಾ ಹಾಸ್ಟೆಲ್ ಮುಂಭಾಗ ಬ್ಯಾರಿಕೇಡ್ ಹಾಕಲಾಗಿದೆ.
ಬೆಳಗ್ಗೆ ಬಂದ ಜನರು ಗಲಿಬಿಲಿ
ಬೆಳಗ್ಗೆಯಿಂದಲೇ ರಿಪೇರಿ ಕಾಮಗಾರಿ ಆರಂಭಿಸಲಾಗಿದೆ. ಇದರ ಬಗ್ಗೆ ಮಾಹಿತಿ ಇಲ್ಲದಿದ್ದರಿಂದ ವಾಹನ ಸವಾರರು ಸವಳಂಗ ರಸ್ತೆವರೆಗೂ ಬಂದು ಗಲಿಬಿಲಿಗೊಂಡರು. ಶಾಲೆ, ಕಾಲೇಜಿಗೆ ಹೋಗುವವರು, ಕಚೇರಿ, ಕೆಲಸಕ್ಕೆ ತೆರಳುವವರು ರೈಲ್ವೆ ಗೇಟ್ ಬಳಿ ಬಂದು ಗೊಂದಲಕ್ಕೀಡಾದರು. ಪರ್ಯಾಯ ಮಾರ್ಗಕ್ಕಾಗಿ ತಡಕಾಡಿದರು.
ಒಳ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್
ಮುಖ್ಯ ರಸ್ತೆ ಬಂದ್ ಆಗಿರುವುದರಿಂದ ಸವಳಂಗ ರಸ್ತೆಯ ಅಕ್ಕಪಕ್ಕದ ಒಳರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಕೀರ್ತಿನಗರ, ಬೊಮ್ಮನಕಟ್ಟೆ, ರಾಗಿಗುಡ್ಡ ಮೂಲಕ ವಾಹನಗಳು ಸಂಚರಿಸುತ್ತಿವೆ. ರಸ್ತೆಗಳು ಕಿರಿದಾಗಿದ್ದು, ಲಾರಿ, ಬಸ್ಸುಗಳು ಸೇರಿದಂತೆ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ.
ಟ್ರಾಫಿಕ್ ಸಮಸ್ಯೆ ನೀಗಿಸಲು ಸಂಚಾರಿ ಪೊಲೀಸರು, ರೈಲ್ವೆ ಪೊಲೀಸರನ್ನು ಕಾಮಗಾರಿ ಸ್ಥಳದಲ್ಲಿ ನಿಯೋಜಿಸಲಾಗಿದೆ.
shimoga, sh