SHIVAMOGGA LIVE NEWS | AIRPORT| 20 ಏಪ್ರಿಲ್ 2022
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಇಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಸೋಗಾನೆಯಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರ ಹೆಸರು ಇಡಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದು ತಿಳಿಸಿದರು.
ಕಾಮಗಾರಿಗೆ ಮತ್ತಷ್ಟು ಅನುದಾನ
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗಾಗಿ ರೈತರು ಹೆಚ್ಚುವರಿ ಜಮೀನು ನೀಡಿದ್ದಾರೆ. ಅದಕ್ಕೆ ಪರಿಹಾರ ನೀಡಬೇಕಿದೆ. ರನ್ ವೇ ಕಾಮಗಾರಿ ಪೂರ್ಣಗೊಳಿಸಲು, ವಿಮಾನ ನಿಲ್ದಾಣ ಸುತ್ತಲು ರಸ್ತೆ ನಿರ್ಮಾಣಕ್ಕೆ 40 ರಿಂದ 50 ಕೋಟಿ ರೂ. ಅನುದಾನ ಬೇಕಿದೆ. ಈ ಹಣ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ
ಅಕ್ಕಪಕ್ಕದ ಗ್ರಾಮದ ರೈತರ ಓಡಾಟಕ್ಕೆ ವಿಮಾನ ನಿಲ್ದಾಣದ ಪಕ್ಕದಲ್ಲಿ ಅಸ್ಫಾಲ್ಟ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇನ್ನು, ವಿಮಾನ ನಿಲ್ದಾಣಕ್ಕೆ ವಿದೇಶಿಯರು, ಬೇರೆ ಕಡೆಯಿಂದ ಪ್ರವಾಸಿಗರು ಬರುತ್ತಾರೆ. ಆದ್ದರಿಂದ ವಿಮಾನ ನಿಲ್ದಾಣದ ಸಂಪರ್ಕಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು.
ನೈಟ್ ಲ್ಯಾಂಡಿಂಗ್, ಕನೆಕ್ಟಿವಿಟಿ ಲೈಸೆನ್ಸ್
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ವಿಮಾನ ಲ್ಯಾಂಡಿಂಗ್’ಗೆ ಅನುಕೂಲ ಆಗುವ ವ್ಯವಸ್ಥೆ ಮಾಡಬೇಕಿದೆ. ಅಲ್ಲದೆ ಕನೆಕ್ಟಿವಿಟಿ ಲೈಸೆನ್ಸಿಂಗ್ ಬೇಕಿದೆ. ಕೇಂದ್ರ ಸರ್ಕಾರದೊಂದಿಗೆ ಈ ಕುರಿತು ಮಾತುಕತೆ ನಡೆಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೈಟ್ ಲ್ಯಾಂಡಿಂಗ್, ಎಟಿಸಿ ಟವರ್’ಗೆ ಅಗತ್ಯವಿರುವ ಉಪಕರಣ, ಕನಕ್ಟಿವಿಟಿ ಲೈಸೆನ್ಸಿಂಗ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ಯಡಿಯೂರಪ್ಪಗೆ ಹೆಚ್ಚಿನ ಆಸಕ್ತಿ
ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಸಕ್ತಿ ಇದೆ. ಬೆಂಗಳೂರಿನಲ್ಲಿ ಇದ್ದಾಗ ವಿಮಾನ ನಿಲ್ದಾಣ ಕುರಿತು ತಿಳಿಸಿದ್ದರು. ಶಿವಮೊಗ್ಗ ಬಂದಾಗಲು ಕರೆ ಮಾಡಿ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆ ಮನವಿ ಮಾಡಿದ್ದರು. ವಿಮಾನ ನಿಲ್ದಾಣ ಮತ್ತು ಶಿವಮೊಗ್ಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಯಡಿಯೂರಪ್ಪ ಅವರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ರನ್ ವೇ ಕಾಮಗಾರಿ ಪರಿಶೀಲನೆ
ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರನ್ ವೇ ಕಾಮಗಾರಿ ಪರಿಶೀಲನೆ ನಡೆಸಿದರು. ಮೂರು ಕಿ.ಮೀ ರನ್ ವೇಯಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಸಂಚರಿಸಿದರು. ರನ್ ವೇ ವಿಸ್ತರಣೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಅಲ್ಲದೆ ಕಾಮಗಾರಿ ಕುರಿತು ಅಧಿಕಾರಿಗಳು, ಗುತ್ತಿಗೆದಾರರಿಂದ ಮಾಹಿತಿಯನ್ನು ಪಡೆದರು.
ಸಂಸದ ಬಿ.ವೈ.ರಾಘವೇಂದ್ರ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಶಾಸಕರಾದ ಹರತಾಳು ಹಾಲಪ್ಪ, ಅಶೋಕ ನಾಯ್ಕ್, ಪ್ರಮುಖರಾದ ಎಸ್.ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200