ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 18 JUNE 2023
SHIMOGA : ನರೇಂದ್ರ ಮೋದಿ ನೇತೃತ್ವದ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆ ಶಿವಮೊಗ್ಗದ ಪಿಇಎಸ್ ಕಾಲೇಜು ಆವರಣದ ಪ್ರೇರಣ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಭೆಯನ್ನು (Public Meeting) ಉದ್ಘಾಟಿಸಿದರು. ಸಭೆಯಲ್ಲಿ ಏನೇನಾಯ್ತು? ಯಾರೆಲ್ಲ ಏನೇನು ಮಾತನಾಡಿದರು? ಇಲ್ಲಿದೆ ಫಟಾಫಟ್ ಅಪ್ಡೇಟ್.
ಯಾರೂ ನಮ್ಮನ್ನು ಅಲುಗಾಡಿಸಲು ಆಗಲ್ಲ
ಸುಳ್ಳು ಆಶ್ವಾಸನೆ ನಂಬಿ ಜನರು ಮೋಸ ಹೋಗಿದ್ದಾರೆ. ವಾಸ್ತವ ಸ್ಥಿತಿ ಮನವರಿಕೆ ಆಗಲಿದೆ. ಕೊಟ್ಟ ಭರವಸೆಗಳನ್ನು ಈಡೇರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಭರವಸೆಗಳನ್ನು ಈಡೇರಿಸುವ ಬದಲು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಆದ್ದರಿಂದ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕ್ಷೇತ್ರವಾರು ಪಕ್ಷವನ್ನು ಬಲಪಡಿಸೋಣ. ಕಾರ್ಯಕರ್ತರು ಕರೆದಲ್ಲಿಗೆ ಬಂದು ಚರ್ಚೆ ನಡೆಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಇರುವ ತನಕ ನಮ್ಮನ್ನು ಯಾರು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಯಡಿಯೂರಪ್ಪ 3 ಪ್ರಮುಖ ಕಿವಿ ಮಾತು, ಏನದು?
‘ಒಬ್ಬ ಕಳ್ಳ, ಇನ್ನೊಬ್ಬ ಮಳ್ಳʼ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಯಾರ ಹೆಸರನ್ನು ಪ್ರಸ್ತಾಪಿಸದೆ ಒಬ್ಬ ಕಳ್ಳ, ಇನ್ನೊಬ್ಬ ಮಳ್ಳ ಎಂದು ಟೀಕಿಸಿದರು.
‘ಪದವೀಧರಿಗೆ 3 ಸಾವಿರ ರೂ. ಎಂದರು. ಈಗ ಈ ವರ್ಷ ಪಾಸ್ ಆದವರಿಗೆ ಎನ್ನುತ್ತಿದ್ದಾರೆ. ಇದನ್ನೆ ಚುನಾವಣೆ ಮೊದಲು ಹೇಳಬೇಕಿತ್ತು. ಆಗ ಬಾಯಲ್ಲಿ ಏನು ಇಟ್ಟುಕೊಂಡಿದ್ರಿ? ಇಂತಹ ಕಳ್ಳ, ಮೆಳ್ಳರನ್ನು ನಾವು ನೋಡಿರಲಿಲ್ಲ. 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಕೊಡುತ್ತಿರುವುದು ನರೇಂದ್ರ ಮೋದಿ ಎಂದು ಜನರಿಗೆ ಗೊತ್ತಾಗಿದೆ. 10 ಕೆ.ಜಿ ಅಕ್ಕಿ ಕೊಡಿ. ಇಲ್ಲದಿದ್ದರೆ ಜನರ ಬ್ಯಾಂಕ್ ಅಕೌಂಟ್ಗೆ ಹಣ ಹಾಕಿ. ಮೋಸ ಮಾಡಿ ಅಧಿಕಾರಕ್ಕೆ ಬಂದವರಿಗೆ ಸರಿಯಾದ ಬಿಸಿ ಮುಟ್ಟಿಸಬೇಕು. ಈ ಮೋಸಕ್ಕೆ ತಾಪಂ, ಜಿಪಂನಲ್ಲಿ ಚುನಾವಣೆಯಲ್ಲಿ ಸರಿಯಾದ ಉತ್ತರ ಕೊಡಬೇಕುʼ ಎಂದರು.
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ‘ಸರ್ಕಾರ ಮತೀಯ ಶಕ್ತಿಗಳ ಕೈವಶವಾಗಿದೆ’
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜನರು ಕಾಂಗ್ರೆಸ್ನ ವಂಚನೆ ಭರವಸೆ ನಂಬಿದರು. ಕೆಎಸ್ಆರ್ಟಿಸಿ ಬಸ್ನಲ್ಲಿ ಹತ್ತಲು ಆಗದ ಪರಿಸ್ಥಿತಿ ಇದೆ. ಹಿಂದೂ, ಮುಸ್ಲಿಂ, ಜೈನರು ಒಟ್ಟಿಗೆ ಬದುಕಬೇಕೆಂಬುದು ಮೋದಿ ಅವರ ಆಶಯ. ಸಿದ್ದರಾಮಯ್ಯ ಸರಕಾರ ಮತೀಯ ಶಕ್ತಿಗಳ ಕೈವಶವಾಗಿದೆ. ಅದಲ್ಲದೆ ಇದ್ದರೆ ಮತಾಂತರ ನಿಷೇಧ ಕಾಯಿದೆ ಯಾಕೆ ರದ್ದು ಮಾಡುತ್ತೀರ ಎಂದು ಪ್ರಶ್ನಿಸಿದರು.
‘ಮೋದಿಯವರ 5 ಕೆ.ಜಿ ಬಿಟ್ಟು 10 ಕೆ.ಜಿ ಅಕ್ಕಿ ಕೊಡಿʼ
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಭರವಸೆ ಕೊಟ್ಟಂತೆ ಮೋದಿಯವರು 5 ಕೆ.ಜಿ ಬಿಟ್ಟು ಹೆಚ್ಚುವರಿ 10 ಕೆ.ಜಿ ಕೊಡಬೇಕಾಗುತ್ತದೆ. ಇದು ಜಾರಿಗೆ ಬರುವವರೆಗೂ ಹೋರಾಟಕ್ಕೆ ಇಳಿಯಬೇಕು. ಪದವಿ, ಡಿಪ್ಲೋಮಾ ಮುಗಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಣ ಕೊಡುತ್ತೇವೆ ಎಂದವರು ಈಗ 2022-23ರಲ್ಲಿ ಪಾಸ್ ಆದವರು ಎನ್ನುತ್ತಿದ್ದಾರೆ. ಮಹಿಳೆಯರಿಗೆ 2 ಸಾವಿರ ಹಣ ಕೊಡುವ ಯೋಜನೆ ಇನ್ನೂ ಶುರುವಾಗಿಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ರಚನಾತ್ಮಕ ವಿರೋಧ ಪಕ್ಷವಾಗಿ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಕೊಳೆತ ಮಾವಿನ ಹಣ್ಣಿನ ಕಥೆ
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮರದಿಂದ ಕೆಳಗೆ ಬಿದ್ದ ಮಾವಿನ ಹಣ್ಣನ್ನು ಯಾರು ತಿನ್ನದೆ ಹಾಗೆ ಬಿಟ್ಟರೆ ಅದು ಅಲ್ಲಿಯೆ ಕೊಳೆತು ಹೋಗುತ್ತದೆ. ಸ್ವಲ್ಪ ದಿನದ ಬಳಿಕ ಆ ಕೊಳೆತ ಹಣ್ಣು ಮಣ್ಣಲ್ಲಿ ಸೇರಿ ಮೊಳಕೆ ಬಂದಿರುತ್ತದೆ. ನಂತರ ಗಿಡವಾಗಿ, ಮರವಾಗುತ್ತದೆ. ಅದೆ ರೀತಿ ಬಿಜೆಪಿ ಪಕ್ಷ ಸೋತಿದೆ ಎಂದ ಮಾತ್ರಕ್ಕೆ ನಾವು ಸುಮ್ಮನಾಗಬೇಕಿಲ್ಲ. ಮುಂದೆ ಹೆಮ್ಮರವಾಗಿ ಬೆಳೆಯಲು ಅವಕಾಶವಿದೆ ಎಂದರು.
ಭಾಷಣದ ವೇಳೆ ಕರೆಂಟ್ ಕಟ್
ಸಂಸದ ಬಿ.ವೈ.ರಾಘವೇಂದ್ರ ಭಾಷಣ ಮಾಡುತ್ತಿದ್ದ ವೇಳೆ ವಿದ್ಯುತ್ ಕಡಿತಗೊಂಡು ಸಭಾಂಗಣದಲ್ಲಿ ಕತ್ತಲು ಅವರಿಸಿತು. ಮೈಕ್ ಕೂಡ ಬಂದಾಯಿತು. ಸ್ವಲ್ಪ ಹೊತ್ತಿಗೆ ಸಭಾಂಗಣದಲ್ಲಿ ಲೈಟ್, ಮೈಕ್ ಎಲ್ಲವು ಆನ್ ಆದವು. ಭಾಷಣ ಮುಂದುವರೆಸಿದ ರಾಘವೇಂದ್ರ, 200 ಯುನಿಟ್ ಉಚಿತವಾಗಿ ಕೊಡುತ್ತೇವೆ ಎಂದರು ಈಗ ಈ ಭಾಗ್ಯ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ವಿಜಯೇಂದ್ರ ಪರ ಘೋಷಣೆ
ಸಭೆ ಆರಂಭದಲ್ಲಿ ವೇದಿಕೆ ಮೇಲಿದ್ದವರನ್ನು ಸ್ವಾಗತಿಸಲಾಯಿತು. ಈ ವೇಳೆ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಘೋಷಣೆ ಜೋರಾಯಿತು. ವಿಜಯೇಂದ್ರ ಅವರ ಅಭಿಮಾನಿಗಳು ಅವರ ಪರವಾಗಿ ಘೋಷಣೆ ಕೂಗಿದರು.
ಮಾಜಿಗಳು, ಹೊಸಬರಿಗೆ ಭಾಷಣವಿಲ್ಲ
ವೇದಿಕೆಯ ಒಂದು ತುದಿಯಿಂದ ಮತ್ತೊಂದು ತುದಿವರೆಗೆ ಮುಖಂಡರು ಆಸೀನರಾಗಿದ್ದರು. ಆದರೆ ಎಲ್ಲರಿಗು ಭಾಷಣಕ್ಕೆ ಅವಕಾಶವಿರಲಿಲ್ಲ. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕರಾದ ಬಿ.ವೈ.ವಿಜಯೇಂದ್ರ, ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಹರತಾಳು ಹಾಲಪ್ಪ ಅವರಿಗೆ ಭಾಷಣಕ್ಕೆ ಚಾನ್ಸ್ ಸಿಗಲಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422