SHIVAMOGGA LIVE NEWS | 23 FEBRURARY 2023
SHIMOGA : ವಿಮಾನ ನಿಲ್ದಾಣ ಲೋಕಾರ್ಪಣೆ ಹಿನ್ನೆಲೆ ಶಿವಮೊಗ್ಗ – ಕಾಚಿನಕಟ್ಟೆ ನಡುವೆ ರಸ್ತೆ ಸಂಪೂರ್ಣ ಸ್ವಚ್ಚವಾಗುತ್ತಿದೆ. ವರ್ಷಗಟ್ಟಲೆ ಬಾಯ್ತೆರೆದು ಕೂತಿದ್ದ ಗುಂಡಿಗಳು ಬಂದ್ ಆಗಿವೆ. ವಿಮಾನ ನಿಲ್ದಾಣದ ರನ್ ವೇ (Run Way) ಮಾದರಿಯಲ್ಲೇ ರಸ್ತೆ ನಳನಳಿಸಲು ಆರಂಭವಾಗಿದೆ.
ಎಲ್ಲವೂ ಕ್ಲೀನ್ ಕ್ಲೀನ್
ಶಿವಮೊಗ್ಗ ಕಾಚಿನಕಟ್ಟೆ ನಡುವೆ ಡಬಲ್ ರೋಡ್ ಇದೆ. ವಿಶಾಲವಾದ ಡಿವೈಡರ್ ಕೂಡ ಇದೆ. ಆರೇಳು ತಿಂಗಳಿಗೆ ಒಮ್ಮೆ ಕಳೆ ತೆಗೆಯಲಾಗುತ್ತಿತ್ತು. ಆದರೆ ವಿಮಾನ ನಿಲ್ದಾಣ ಲೋಕಾರ್ಪಣೆ ಹಿನ್ನೆಲೆ ಡಿವೈಡರ್ ಮೇಲೆ ಬೆಳೆದಿದ್ದ ಕಳೆ, ಬಿದ್ದಿದ ಕಸ ಸಂಪೂರ್ಣ ಕ್ಲೀನ್ ಮಾಡಲಾಗುತ್ತಿದೆ. ಜೆಸಿಬಿ, ಟ್ರಾಕ್ಟರ್, ಲಾರಿಗಳನ್ನು ಬಳಸಿ ಮಣ್ಣು ಕೊಂಡೊಯ್ದು ಬೇರೆಡೆ ಹಾಕಲಾಗುತ್ತಿದೆ. ಕೆಲಸಗಾರರು ಕೂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ರಸ್ತೆಯ ಎರಡು ಬದಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಗುಂಡಿಗಳ ಬಾಯಿ ಬಂದ್
ಡಬಲ್ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಾಯ್ತೆರೆದಿದ್ದವು. ಸಂತೆ ಕಡೂರಿನಿಂದ ಮಂಡೇನಕೊಪ್ಪವರೆಗೆ ಹಲವು ಗುಂಡಿಗಳಿದ್ದವು. ಇವುಗಳ ಕಾರಣಕ್ಕೆ ಅನೇಕ ಅಪಘಾತಗಳು ಸಂಭವಿಸಿದ್ದವು. ವಿಮಾನ ನಿಲ್ದಾಣ ಉದ್ಘಾಟನೆ ಹಿನ್ನೆಲೆ ಈ ಗುಂಡಿಗಳ ಬಾಯಿ ಬಂದ್ ಮಾಡಲಾಗಿದೆ. ಸಂತೆ ಕಡೂರಿನಿಂದ ಕಾಚಿನಕಟ್ಟೆವರೆಗೆ ಡಾಂಬರ್ ಹಾಕಲಾಗಿದೆ. ಸದ್ಯ ಈ ರಸ್ತೆ ವಿಮಾನ ನಿಲ್ದಾಣದ ರನ್ ವೇ (Run Way) ಮಾದರಿಯಲ್ಲೇ ಕಂಗೊಳಿಸುತ್ತಿದೆ.
ಅಧಿಕಾರಿಗಳು, ರಾಜಕಾರಣಿಗಳ ನಿತ್ಯ ಸಂಚಾರ
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆ ಶಿವಮೊಗ್ಗ – ಕಾಚಿನಕಟ್ಟೆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹಿಂದೆಂದೂ ಈ ರಸ್ತೆಗೆ ಬಾರದ ಅಧಿಕಾರಿಗಳೆ ಈಗ ನಿತ್ಯ ವಿಮಾನ ನಿಲ್ದಾಣಕ್ಕೆ ದಾಂಗುಡಿ ಇಡುತ್ತಿದ್ದಾರೆ. ಹಗಲು – ರಾತ್ರಿ ಪೊಲೀಸ್ ವಾಹನಗಳು ಸಂಚರಿಸುತ್ತಿವೆ. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಸಂಸದರು, ಶಾಸಕರ ಕಾರುಗಳು ದಿನಕ್ಕೊಮ್ಮೆಯಾದರೂ ಈ ರಸ್ತೆಯಲ್ಲಿ ಕಾಣಿಸುತ್ತಿವೆ.
ಬಿ.ಹೆಚ್.ರಸ್ತೆಯಲ್ಲಿ ಲೊಡ್ ಗಟ್ಟಲೆ ಮಣ್ಣು
ಎಂ.ಆರ್.ಎಸ್ ಸರ್ಕಲ್ ನಿಂದ ಹೊಳೆ ಬಸ್ ನಿಲ್ದಾಣದವರೆಗೆ ಬಿ.ಹೆಚ್.ರಸ್ತೆಗು ಹೊಸ ಕಳೆ ಬರುತ್ತಿದೆ. ನಿರ್ಮಾಣವಾದಾಗಿನಿಂದ ಒಮ್ಮೆಯೂ ರಸ್ತೆ ಪಕ್ಕ ಮತ್ತು ಡಿವೈಡರ್ ಮೇಲಿದ್ದ ಮಣ್ಣು ತೆಗೆದಿರಲಿಲ್ಲ. ಕಳೆದ ಒಂದು ವಾರದಿಂದ ರಸ್ತೆ ಸ್ವಚ್ಛವಾಗುತ್ತಿದೆ. ಲೋಡ್ ಗಟ್ಟಲೆ ಮಣ್ಣು ತೆಗೆದು ಬೇರೆಡೆ ಕೊಂಡೊಯ್ದು ಹಾಕಲಾಗುತ್ತಿದೆ. ಅಪಘಾತಗಳು ಸಂಭವಿಸಿದಾಗಲೂ ಮುಚ್ಚದೆ ಇದ್ದ ಗುಂಡಿಗಳಿಗೆ ಸದ್ಯದಲ್ಲೇ ಶಾಸ್ತಿ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ – ದೆಹಲಿಯಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ 4 ಕಾರು ಸಹಿತ ಆಗಮಿಸಿದ ಪ್ರಧಾನಿ ಭದ್ರತಾ ಪಡೆ
ವಿಮಾನ ನಿಲ್ದಾಣದಿಂದಾಗಿ ಶಿವಮೊಗ್ಗದ ಬಿ.ಹೆಚ್.ರಸ್ತೆ ಮತ್ತು ಕಾಚಿನಕಟ್ಟೆ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿರುವವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಹಿರಿಯ ರಾಜಕಾರಣಿಗಳು ಆಗಾಗ ಈ ರಸ್ತೆಯಲ್ಲಿ ಸಂಚರಿಸುವಂತಾಗಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.