SHIVAMOGGA LIVE NEWS | 3 ಮಾರ್ಚ್ 2022
ಶಿವಮೊಗ್ಗ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಿದೆ. ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು ಇವತ್ತು ಬಜೆಟ್ ಮಂಡಿಸಿದರು. ಹಿಂದಿನ ಯೋಜನೆಗಳಿಗೆ ಅನುದಾನ ಒದಗಿಸುವುದರ ಜೊತೆ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.
ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಬಜೆಟ್ ಮಂಡನೆ ಮಾಡಲಾಯಿತು.
ಬಜೆಟ್ ವಿಶೇಷತೆಗಳೇನು?
ಪ್ರಣಿಗಳ ಚಿತಾಗಾರ : ನಗರದಲ್ಲಿ ಅಪಘಾತಕ್ಕೀಡಾಗಿ, ಅನಾರೋಗ್ಯಕ್ಕೆ ತುತ್ತಾಗುವ ಪ್ರಾಣಿಗಳ ಔಷಧೋಪಚಾರ ನೀಡಲು ಪ್ರಾಣಿಗಳ ತಂಗುದಾಣ. ಪ್ರಾಣಿಗಳನ್ನು ಸುರಕ್ಷಿತವಾಗಿ ಸಾಗಣೆ ಮಾಡಲು ಸ್ವಯಂ ಚಾಲಿತ ಆಧುನಿಕ ವಾಹನ. ರಾಜ್ಯದಲ್ಲೆ ಮೊದಲ ಭಾರಿ ಎರಡು ಎಕರೆ ವ್ಯಾಪ್ತಿಯಲ್ಲಿ ಪ್ರಾಣಿಗಳ ಚಿತಾಗಾರ. ಇದಕ್ಕೆ 50 ಲಕ್ಷ ರೂ. ಮೀಸಲು.
ತ್ಯಾಜ್ಯ ನಿರ್ವಹಣೆ : ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಅಧುನಿಕ ಯಂತ್ರಗಳ ಖರೀದಿಗೆ 5 ಕೋಟಿ ರೂ. ಮೀಸಲು. ಸ್ವೀಪಿಂಗ್ ಮೆಷಿನ್, ಶೀಲ್ಟ್’ಗಳನ್ನು ತೆಗೆಯಲು ಆಟೋ ಟಿಪ್ಪರ್, ಕಾಂಪ್ಯಾಕ್ಟರ್ ಖರೀದಿಗೆ ಯೋಜನೆ.
ಆಧುನಿಕ ಕಸಾಯಿಖಾನೆ : ನಗರದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣಕ್ಕೆ ಪ್ರಸಕ್ತ ಬಜೆಟ್’ನಲ್ಲಿ 50 ಲಕ್ಷ ರೂ. ಮೀಸಲು
ಡಿ ಗ್ರೂಪ್ ನೌಕರರಿಗೆ ಮನೆ : ಮಹಾನಗರ ಪಾಲಿಕೆ ಡಿ ಗ್ರೂಪ್ ನೌಕರರು, ನೀರು ಸರಬರಾಜು ಮಾಡುತ್ತಿರುವ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣ. ಇದಕ್ಕೆ 5 ಕೋಟಿ ರೂ. ಮೀಸಲು.
ಒಳಾಂಗಣ ಕ್ರೀಡಾಂಗಣ, ಆಟದ ಮೈದಾನ : ಹುಡ್ಕೊ, ಕಲ್ಲಹಳ್ಳಿಯಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿಇದಕ್ಕೆ 1.50 ಕೋಟಿ ರೂ. ಮೀಸಲಾಗಿದೆ.
ಸು-ಶಾಸನ ಭವನ : ಪಾಲಿಕೆಯ ಪ್ರತಿ ವಾರ್ಡ್’ನಲ್ಲೂ ಸು-ಶಾಸನ ಭವನ ಮತ್ತು ಅಭಿಯಂತರರ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ರೂ.
ಕಾಂಪ್ಲೆಕ್ಸ್ ನಿರ್ಮಾಣ : ವಿನೋಬನಗರದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ, ಗಾಂಧಿ ಬಜಾರ್ ಬಟ್ಟೆ ಮಾರುಕಟ್ಟೆ ಅಭಿವೃದ್ಧಿಗೆ ಯೋಜನೆ. ಗಾಂಧಿನಗರ, ಮಿಳ್ಳಘಟ್ಟ, ಸೀಗೆಹಟ್ಟಿ ಸೇರಿದಂತೆ ವಿವಿಧೆಡೆ ವಾಣಿಜ್ಯ ಮಳಿಗೆ ಅಭಿವೃದ್ಧಿಗೆ ಯೋಜನೆ.
ಗೋವು ಸಂರಕ್ಷಣೆಗೆ ಯೋಜನೆ : ಗೋವುಗಳ ಸಂರಕ್ಷಣೆಗೆ ಶೆಲ್ಟರ್ ನಿರ್ಮಾಣ, ಉಚಿತ ಆರೋಗ್ಯ ತಪಾಸಣೆ, ಪಶುಪಾಲನ ಇಲಾಖೆ ಸಹಯೋಗದಲ್ಲಿ ಜಾನುವಾರುಗಳಿಗೆ ಅಲ್ಟ್ರಾ ಸೌಂಡ್ ಉಪಕರಣ ಅಳವಡಿಕೆ, ತ್ಯಾವರೆ ಚಟ್ನಳ್ಳಿಯ 5 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣ. ಶೇ.25ರಷ್ಟು ಕೆಲಸ ಮುಗಿದಿದ್ದು. ಉಳಿದ ಕಾಮಗಾರಿ ಮುಂದುವರಿಕೆ.
ಹಸಿರು ಶಿವಮೊಗ್ಗ : ಶಿವಪ್ಪನಾಯಕನ ಕೋಟೆ, 52 ಪಾರ್ಕ್’ಗಳ ಅಭಿವೃದ್ಧಿ ಹಸಿರಿನಿಂದ ಕಂಗಳಿಸುತ್ತಿದೆ. ಅದೆ ಮಾದರಿ ಉಳಿದ ಪಾರ್ಕ್’ಗಳ ಹಸಿರೀಕರಣ ಮಾಡುವುದು.
ಕೆರೆಗಳಿಗೆ ಕಾಯಕಲ್ಪ : ಅಮೃತ್ ಯೋಜನೆ ಅಡಿ ಪಾಲಿಕೆ ವ್ಯಾಪ್ತಿಯ 5 ಕೆರೆಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಕಾಯಕಲ್ಪ
ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗ : ನಗರದಲ್ಲಿ ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಇದರ ಕುರಿತು ಅರಿವು ಮತ್ತು ಜಾಹೀರಾತಿಗೆ 10 ಲಕ್ಷ ರೂ.
ಸ್ತ್ರೀ ಸಬಲೀಕರಣ : ವಿಶ್ವ ಮಹಿಳಾ ದಿನಾಚರಣೆಯಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿ. ತಲಾ 10 ಸಾವಿರ ರೂ. ನಗದು, ಪಾರಿತೋಷಕವನ್ನು ಒಳಗೊಂಡಿರುತ್ತದೆ.
ವಿಶೇಷ ಚೇತನರಿಗೆ ವಾಹನ : ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು 20 ಲಕ್ಷ ರೂ.
ದುರ್ಬಲರಿಗೆ ಬಲ : ಪಾಲಿಕೆ ವ್ಯಾಪ್ತಿಯಲ್ಲಿ ದುರ್ಬಲರು, ನಿರ್ಗತಿಕರು, ಅನಾಥರ ಏಳಿಗೆಗಾಗಿ ಪಂಡಿತ್ ದೀನದಯಾಳ್ ಹೃದಯಸ್ಪರ್ಶಿ ಯೋಜನೆ. ಇದರ ಅಡಿಯಲ್ಲಿ ಮಾದರಿ ಆಶ್ರಯ ತಾಣ ನಿರ್ಮಾಣಕ್ಕೆ 35 ಲಕ್ಷ ರೂ.
ಸ್ಲಂಗಳಲ್ಲಿ ಆರೋಗ್ಯ ಯೋಜನೆ : ಅಜಿತ್ ಶ್ರೀ ಸೇವಾ ಯೋಜನೆ ಅಡಿ ನಗರದ ವಿವಿಧ ಸ್ಲಂಗಳಲ್ಲಿ ಆರೋಗ್ಯ ಕಾರ್ಯಕ್ರಮಕ್ಕೆ 25 ಲಕ್ಷ ರೂ.
ಮಕ್ಕಳಲ್ಲಿ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ : ಲವ ಕುಶ ಮಕ್ಕಳ ಕಲ್ಯಾಣ ಯೋಜನೆ ಅಡಿಯಲ್ಲಿ, ಮಕ್ಕಳಲ್ಲಿನ ಕಲೆ, ನಾಟಕ, ಆಟ ಇತ್ಯಾದಿಗಳ ವಿಕಾಸಕ್ಕಾಗಿ ಬಾಲ ವಿಕಾಸ ಕೇಂದ್ರಗಳ ಮೂಲಕ ವಿವಿಧ ಚಟುವಟಿಕೆ ರೂಪಿಸಲು 10 ಲಕ್ಷ ರೂ.
ಸಾಂಸ್ಕೃತಿಕ ಸುರಕ್ಷಾ : ನಗರದಲ್ಲಿ ಸಾಂಸ್ಕೃತಿಕ ಚಟುಟಿಕೆ ಪ್ರೋತ್ಸಾಹಿಸಲು ಯೋಜನೆ. ಸಾಂಸ್ಕೃತಿಕ ಉತ್ಸವಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಆರ್ಥಿಕ ಪ್ರೋತ್ಸಾಹ. ಬಯಲು ರಂಗ ಮಂದಿರಗಳ ನಿರ್ಮಾಣ. ಬೆಳ್ಳಿ ಮಂಡಲ ಮೂಲಕ ಅತ್ಯುತ್ತಮ ಛಾಯಾಚಿತ್ರ ನಿರ್ಮಾಣಕ್ಕೆ ಆದ್ಯತೆ. 10 ಲಕ್ಷ ರೂ. ಮೀಸಲು.
ಕ್ರೀಡಾಪಟುಗಳಿಗೆ ಪ್ರೋತ್ಸಾಹ : ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ. ರಾಷ್ಟ್ರೀಯ ಕ್ರೀಡೆಗಳಿಗೆ ಹೆಚ್ಚು ಆದ್ಯತೆ, ಸ್ವದೇಶಿ ಕ್ರೀಡೆಗೆ ಸಂಪೂರ್ಣ ಪ್ರೋತ್ಸಾಹ. ಕಾಲೇಜು ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಬಂದರೆ ಪ್ರೋತ್ಸಾಹ ಧನ. ಇದಕ್ಕಾಗಿ 10 ಲಕ್ಷ ರೂ.
ಯುವಕರಿಗೆ ಬಲ : ಸ್ವಂತ ಉದ್ಯೋಗಕ್ಕೆ ಸಹಾಯಧನಕ್ಕಾಗಿ ವಿವಿಧ ಬ್ಯಾಂಕ್ ಮೂಲಕ ವ್ಯವಸ್ಥೆ, ಕೌಶಲ್ಯ ಅಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಪಾಲಿಕೆ ನೇತೃತ್ವದಲ್ಲಿ ಉದ್ಯೋಗ ಮೇಳ ಆಯೋಜನೆಗೆ ಸ್ವಾಮಿ ವಿವೇಕಾನಂದ ಯುವ ಯೋಜನೆ ಹೆಸರಿನಲ್ಲಿ 25 ಲಕ್ಷ ರೂ. ಮೀಸಲು.
ಮಹಿಳೆಯರ ಕೌಶಲ್ಯಾಭಿವೃದ್ದಿ : ಗುಡಿಕೈಗಾರಿಕೆ, ಕರಕುಶಲ, ಕೌಶಲ್ಯ ತರಬೇತಿಗೆ ರಾಣಿ ಚೆನ್ನಮ್ಮ ಮಹಿಳಾ ಯೋಜನೆ. ಇದಕ್ಕೆ 25 ಲಕ್ಷ ರೂ. ಮೀಸಲು.
ಪತ್ರಕರ್ತರ ಕ್ಷೇಮಾಭಿವೃದ್ಧಿ : ಪಾಲಿಕೆ ವ್ಯಾಪ್ತಿಯ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 15 ಲಕ್ಷ ರೂ. ಮೀಸಲು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈವರೆಗೂ ಪಾಲಿಕೆಯ 36 ಸ್ವತ್ತುಗಳಿಗೆ ಫೆನ್ಸಿಂಗ್ ಅಳವಡಿಸಲಾಗಿದೆ. ಇದನ್ನು ಈ ಭಾರಿಯು ಮುಂದುವರೆಸಲಾಗುತ್ತದೆ. ಮೀನು ಮತ್ತು ಮಾಂಸದ ಮಾರುಕಟ್ಟೆ ನಿರ್ಮಾಣ ಈ ಭಾರಿಯು 50 ಲಕ್ಷ ರೂ. ಮೀಸಲು. ಶಾಲೆಗಳ ಅಭಿವೃದ್ಧಿ, ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರೋತ್ಸಾಹ ಧನ, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಶ್ರೀ ಸಿದ್ಧಗಂಗಾ ಶ್ರೀ ವಿದ್ಯಾ ಸರಸ್ವತಿ ಯೋಜನೆ ಅಡಿ 40 ಲಕ್ಷ ಮೀಸಲು.