ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಸೆಪ್ಟಂಬರ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಡಿಆರ್ಡಿಓ (ಡಿಫೆನ್ಸ್ ರಿಸರ್ಚ್ ಡೆವಲಪ್ಮೆಂಟ್ ಆರ್ಗನಜೇಷನ್) ರಕ್ಷಣಾ ಇಲಾಖೆ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ಸೈನಿಕರಿಗೆ ಬೇಕಾದ ವಿಶೇಷ ವಸ್ತುಗಳು, ಔಷಧ, ಕೆಮಿಕಲ್ಸ್ ಇತ್ಯಾದಿಗಳನ್ನು ಉತ್ಪಾದಿಸಲು ಅಗತ್ಯ ಸಂಶೋಧನೆಯನ್ನು ಈ ಕೇಂದ್ರದಲ್ಲಿ ನಡೆಸಲಾಗುವುದು. ಪಶ್ಚಿಮಘಟ್ಟಗಳಲ್ಲಿ ಅಮೂಲ್ಯವಾದ ಔಷಧಿ ಸಸ್ಯಗಳು ಸಿಗುವುದರಿಂದ ಇದನ್ನು ಬಳಸಿಕೊಂಡು ಇಲ್ಲಿ ಸಂಶೋಧನೆ ಮೂಲಕ ಸೈನಿಕರಿಗೆ ಬೇಕಾಗುವ ವಸ್ತುಗಳ ಅನ್ವೇಷಿಸಬಹುತಾಗಿದೆ ಎಂದರು.
ಇದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಇದರ ಯೋಜನಾ ವೆಚ್ಚ 30 ಕೋಟಿ ರೂ. ಆಗಲಿದೆ. ಈ ಸಂಶೋಧನಾ ಕೇಂದ್ರದಿಂದ ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಎಂದರು.
ಶಿವಮೊಗ್ಗದಲ್ಲಿ ಸ್ಪೈಸ್ ಪಾರ್ಕ್
ಶಿವಮೊಗ್ಗ ಸೇರಿದಂತೆ ಸುತ್ತ ಮುತ್ತಲಿನ ಮಲೆನಾಡಿನ ಜಿಲ್ಲೆಗಳಲ್ಲಿ ಶುಂಠಿ, ಕಾಳು ಮೆಣಸು, ಅರಿಶಿಣ ಇತ್ಯಾದಿ ಸಾಂಬಾರ್ ಪದಾರ್ಥಗಳನ್ನು ಹೆಚ್ಚು ಬೆಳೆಯುವುದರಿಂದ ಶಿವಮೊಗ್ಗದಲ್ಲಿ ಸ್ಪೈಸ್ ಪಾರ್ಕ್ ಸ್ಪಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರದ ಸ್ಪೈಸ್ ಕಮಿಟಿಯ ಸದಸ್ಯನಾಗಿರುವುದರಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಘವೇಂದ್ರ ತಿಳಿಸಿದರು.
ಶಿವಮೊಗ್ಗ – ಭದ್ರಾವತಿ ನಡುವೆ 50 ಎಕರೆ ಜಾಗ ಗುರುತಿಸಲಾಗಿದೆ. ಈ ಸ್ಪೈಸ್ ಪಾರ್ಕ್ನಲ್ಲಿ ಸಾಂಬಾರ್ ಪದಾರ್ಥಗಳ ಸಂಸ್ಕರಣೆ, ಸಂಗ್ರಹಣೆ ಮೂಲಕ ರಫ್ತಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ಇಲ್ಲಿ 10 ಕೋಟಿ ರೂ. ವೆಚ್ಚದ ಕೋಲ್ಡ್ ಸ್ಟೋರೇಜ್ನ್ನು ನಿರ್ಮಿಸಲಾಗುವುದು ಎಂದರು.
ಹಾಲಿನಪುಡಿ ಘಟಕ
ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಪ್ರತಿದಿನ 5.10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈ ಪೈಕಿ ಶೇ.50ರಷ್ಟು ಹಾಲು ಮಾತ್ರ ಖರ್ಚಾಗುತ್ತಿದ್ದು, ಇದನ್ನು ಹಾಲಿನ ಪುಡಿ ಮಾಡಲು ದೂರದ ಘಟಕಗಳಿಗೆ ಕಳುಹಿಸಲಾಗುತ್ತಿದೆ. ಇದರ ಬದಲು ಇಲ್ಲಿಯೇ 25 ಎಕರೆ ಜಾಗದಲ್ಲಿ ಹಾಲಿನ ಪುಡಿ ಘಟಕ ಸ್ಥಾಪಿಸಲು 150 ಕೋಟಿ ರೂ. ಯೋಜನೆ ಸಿದ್ದಪಡಿಸಲಾಗಿದೆ. ಇದಕ್ಕೆ ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವರಿಗೆ ಅನುದಾನ ನೀಡಲು ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಶಿವಮೊಗ್ಗಕ್ಕೆ ಎಫ್ಎಂ ಕೇಂದ್ರ
ನಗರದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಎಫ್.ಎಂ. ಕೇಂದ್ರವನ್ನು ವಿದ್ಯಾನಗರದ ಹೆಚ್ಪಿಟಿ ದೂರದರ್ಶನ ಕೇಂದ್ರದಲ್ಲಿ ಸ್ಥಾಪಿಸಲು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವರನ್ನು ಕೋರಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಇಲ್ಲಿ ಸ್ಟೂಡಿಯೋದೊಂದಿಗೆ ಎಫ್ಎಂ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಿದ್ದಾರೆ ಎಂದರು.
ಬೆಂಗಳೂರು – ಮುಂಬೈ ಕಾರಿಡಾರ್
ಶಿವಮೊಗ್ಗ ವಲಯವನ್ನು ಬೆಂಗಳೂರು – ಮುಂಬೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಗೆ ಸೇರ್ಪಡೆ ಮಾಡಲು ಪ್ರಯತ್ನ ನಡೆಸಲಾಗಿದೆ. ಇದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಠಿ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚುವುದು ಎಂದರು.
ಇಂಡೋರ್ ಕ್ರೀಡಾಂಗಣ ಸ್ಥಾಪನೆ
ನಗರದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಸ್ಥಾಪಿಸಲಾಗುವುದು. ಇದರಂತೆ ತೀರ್ಥಹಳ್ಳಿಯಲ್ಲೂ ಕ್ರೀಡಾಂಗಣ ಸ್ಥಾಪನೆಯಾಗುವುದು ಎಂದರು.
ಮತ್ತೊಂದು ಕೇಂದ್ರಿಯ ವಿದ್ಯಾಲಯ
ಕೇಂದ್ರ ಸರ್ಕಾರದ ಕ್ಲಸ್ಟರ್ ರಿಸೋರ್ಸ್ ಸೆಂಟರ್ ಸ್ಥಾಪನೆ, ಏಕಲವ್ಯ ಮಾದರಿ ವಸತಿ ಶಾಲೆ, ವಾಜಪೇಯಿ ಶಾಲೆ, ಮತ್ತೊಂದು ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಮನವಿ ಸಲ್ಲಿಸಿದ್ದು ಕೇಂದ್ರ ಸಚಿವರಿಂದ ಪೂರಕ ಸ್ಪಂದನೆ ಸಿಕ್ಕಿದೆ ಎಂದರು.
ವಿಐಎಸ್ಎಲ್ ಪುನಶ್ಚೇತನ ಹಾಗೂ ಎಂಪಿಎಂ ಪುನರ್ ಆರಂಭಕ್ಕೆ ಕ್ರಮ ಕೈಗೊಂಡಿದ್ದು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಂಸದರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಆರಗ ಜ್ಞಾನೇಂದ್ರ, ಅಶೋಕ ನಾಯ್ಕ, ಮೇಯರ್ ಸುವರ್ಣ ಶಂಕರ್, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ಪ್ರಮುಖರಾದ ಎಸ್. ದತ್ತಾತ್ರಿ, ಚನ್ನಬಸಪ್ಪ, ಜ್ಞಾನೇಶ್ವರ್, ಗಿರೀಶ್ ಪಟೇಲ್, ಜಗದೀಶ್ ಮತ್ತಿತರರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]