ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 5 DECEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ನಗರದ ಫ್ರೀಡಂ ಪಾರ್ಕ್ನಲ್ಲಿ ಇದೆ ಮೊದಲ ಬಾರಿಗೆ ಬೃಹತ್ ಸ್ವದೇಶಿ ಮೇಳ ಆಯೋಜಿಸಲಾಗಿದೆ. ಡಿ.6 ರಿಂದ 10ರವರೆಗೆ ಮೇಳ ನಡೆಯಲಿದೆ. ಸ್ವದೇಶಿ ಜಾಗರಣ ಮಂಚ್ ವತಿಯಿಂದ ದೇಶೀಯ ವಸ್ತುಗಳ ಪರಿಚಯ ಮತು ಸ್ವದೇಶಿ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸಲು ಮೇಳ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ.
250ಕ್ಕೂ ಹೆಚ್ಚು ಮಳಿಗೆ
ಈ ಮೇಳದಲ್ಲಿ 250 ಕ್ಕೂ ಹೆಚ್ಚು ಸ್ವದೇಶಿ ಮಳಿಗೆಗಳು ಭಾಗವಹಿಸಲಿವೆ. ವೈವಿಧ್ಯಮಯ ದೇಶೀಯ ಆಹಾರಗಳು, ದೇಶೀಯ ಕ್ರೀಡೆಗಳು, ಜಾನಪದ ಕಲಾ ವೈಭವ, ಯಕ್ಷಗಾನ, ಬಾನ್ಸುರಿ ವಾದನ, ನೃತ್ಯ ರೂಪಕ, ಜಾದೂ ಪ್ರದರ್ಶನ ಸೇರಿದಂತೆ 16 ಕ್ಕೂ ಹೆಚ್ಚು ಶಿಬಿರ ಹಾಗೂ ತರಬೇತಿ ಕಾರ್ಯಾಗಾರಗಳು ನಡೆಯಲಿವೆ.
ಉದ್ಘಾಟನೆಗೆ ಮೈಸೂರು ರಾಜ
ಡಿಸೆಂಬರ್ 6 ರಂದು ಸಂಜೆ 6.30ಕ್ಕೆ ಬೃಹತ್ ಮೇಳದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮೈಸೂರು ಸಂಸ್ಥಾನದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ. ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಭಾಗವಹಿಸುವರು. ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಮುಖ್ಯ ಭಾಷಣ ಮಾಡಲಿದ್ದಾರೆ.
ಭರಪೂರ ಸ್ವದೇಶಿ ಆಹಾರ
ಆಹಾರ ಪ್ರಿಯರಿಗಾಗಿ ವಿವಿಧ ಖಾದ್ಯ ಸವಿಯಲು ಅವಕಾಶವಿದೆ. ಮೇಲುಕೋಟೆ ಪುಳಿಯೋಗರೆ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆದೋಸೆ, ಸಾವಯವ ಕಬ್ಬಿನಹಾಲು, ಅಡಕೆ ಐಸ್ ಕ್ರೀಂ, ಬಂಗಾರಪೇಟೆ ಚಾಟ್ಸ್, ಹುಬ್ಬಳ್ಳಿಯ ಗಿರಮಿಟ್, ಸಿರಿಧಾನ್ಯಗಳ ರೊಟ್ಟಿ (ನವಣೆ, ಸಜ್ಜೆ, ರಾಗಿ, ಜೋಳ ,ಅಕ್ಕಿ ರೊಟ್ಟಿ) ಸೇರಿದಂತೆ ಕವಳಿ, ಕಂಚಿ, ಮಾವು, ನಿಂಬೆ, ಮೆಣಸಿನ ಹಿಂಡಿ, ಮೆಂತ್ಯ ಹಿಂಡಿ, ಅಗಸಿ, ಶೇಂಗಾ, ಗುರೆಳ್ಳು ಚಟ್ನಿ ಪುಡಿ ಹೀಗೆ ನೂರಾರು ರೀತಿಯ ತರೇವಾರಿ ಆಹಾರ ಪದಾರ್ಥ, ತಿಂಡಿ, ತಿನಿಸು ಲಭ್ಯವಿದೆ.
ಜಾನಪದ ಕಲಾ ವೈಭವ
ಡಿಸೆಂಬರ್ 6ರ ರಾತ್ರಿ 8.30ಕ್ಕೆ ಜಾನಪದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭದ್ರಾವತಿ ತಾಲ್ಲೂಕು ಎಮ್ಮೆಹಟ್ಟಿಯ ಶ್ರೀ ಗಜಾನನ ಡೊಳ್ಳು ಮತ್ತು ಸಾಂಸ್ಕೃತಿಕ ಕಲಾ ತಂಡ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾನಪದ ಕಲಾ ತಂಡ, ವೀರಭದ್ರ ಕುಣಿತ ಮತ್ತು ವೀರಗಾಸೆ ಪ್ರದರ್ಶನ ಮಾಡಲಿದೆ.
ತಾರಸಿ ತೋಟ ತರಬೇತಿ ಕಾರ್ಯಾಗಾರ
ಡಿಸೆಂಬರ್ 7 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ ತಾರಸಿ ತೋಟ ತರಬೇತಿ ಕಾರ್ಯಾಗಾರ ನಡೆಯಲಿದೆ. ಬೆಂಗಳೂರಿನ ತಾರಸಿ ತೋಟ ತರಬೇತಿ ತಜ್ಞರಾದ ಪ್ರತಿಮಾ ಅಡಿಗ ಅವರು ನಡೆಸಿಕೊಡಲಿದ್ದಾರೆ.
ಸಂವಾದ ಮತ್ತು ಕಾರ್ಯಾಗಾರ
ಡಿಸೆಂಬರ್ 7 ರಂದು ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಸಂಘಟನೆಯಿಂದ ಕೃಷಿ ಮಾರುಕಟ್ಟೆ, ಯುವಕರ ಪಾತ್ರದ ಕುರಿತು ಸಂವಾದ ಹಾಗೂ ಸಾವಯವ ಕೃಷಿ, ಪ್ರಾತ್ಯಕ್ಷಿಕೆ, ಪ್ರದರ್ಶನ ವಿಸ್ತರಣೆ ಕಾರ್ಯಾಗಾರ ನಡೆಯಲಿದೆ.
ಆಯುರ್ವೇದ ಶಿಬಿರ
ಡಿಸೆಂಬರ್ 8 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಶಿವಮೊಗ್ಗದ ವೈದ್ಯ ಡಾ.ಎಂ.ಬಿ.ಗುರುರಾಜ ಅವರು ಆಯುರ್ವೇದ ಶಿಬಿರ ನಡೆಸಿಕೊಡಲಿದ್ದಾರೆ. ಆರೋಗ್ಯಕರ ಜೀವನ ಪದ್ಧತಿ ಮತ್ತು ಮನೆಯಲ್ಲೇ ಮಾಡಿಕೊಳ್ಳಬಹುದಾದ ಸರಳ ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ನೀಡಲಾಗುತ್ತದೆ.
ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ
ಡಿಸೆಂಬರ್ 8 ರಂದು ಸಂಜೆ 6 ಗಂಟೆಗೆ ಹನುಮಗಿರಿ ಶ್ರೀ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವಂದೇ ಮಾತರಂ ನೃತ್ಯ ರೂಪಕ
ಡಿಸೆಂಬರ್ 9 ರ ಶನಿವಾರ ರಾತ್ರಿ 7 ಗಂಟೆಗೆ ಮೈಸೂರಿನ ನೃತ್ಯ ನಿಪುಣೆ ಡಾ.ಕೃಪಾ ಫಡಕೆ ಮತ್ತು ತಂಡದಿಂದ ವಂದೇ ಮಾತರಂ ನೃತ್ಯ ರೂಪಕ ನಡೆಯಲಿದೆ.
ಪಂಚಗವ್ಯ ಚಿಕಿತ್ಸಾ ಶಿಬಿರ
ಡಿಸೆಂಬರ್ 9 ರಂದು ಪಂಚಗವ್ಯ ಚಿಕಿತ್ಸಾ ಶಿಬಿರ ( ಗೋ ಆಧಾರಿತ) ವನ್ನು ವೈದ್ಯ ಡಾ.ಡಿ.ಪಿ.ರಮೇಶ್ ಅವರು ನಡೆಸಿಕೊಡಲಿದ್ದಾರೆ.
ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ
ಡಿಸೆಂಬರ್ 9ರ ಶನಿವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ ನಡೆಯಲಿದೆ. ಕೋಲಾರದ ಕರ್ನಾಟಕ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್ ಶಿಬಿರವನ್ನು ನಡೆಸಿ ಕೊಡಲಿದ್ದಾರೆ. ಶಿಬಿರದಲ್ಲಿ ಸ್ನಾನ ಚೂರ್ಣ, ಹಲ್ಲುಜ್ಜುವ ಪುಡಿ, ಆರೋಗ್ಯ ವರ್ಧಕ ಪಾನೀಯ, ಕಫ ಮತ್ತು ಅಸ್ತಮಾ ನಿವಾರಣೆಗೆ ಸಿರಫ್, ಮೌತ್ ರಿಫ್ರೆಶನರ್, ಮಧುಮೇಹ ನಿವಾರಣಾ ಔಷಧಿ, ವಾತ-ಪಿತ್ತಹರ ಔಷಧಿಗಳ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು.
ಯೋಗಾಸನ ಪ್ರದರ್ಶನ
ಡಿಸೆಂಬರ್ 10 ರ ಭಾನುವಾರ ಸಂಜೆ 4 ರಿಂದ 5.30 ರವರೆಗೆ ಶಿವಮೊಗ್ಗ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗಾಸನ ಪ್ರದರ್ಶನ ನಡೆಯಲಿದೆ.
ಜಾದೂ ಪ್ರದರ್ಶನ
ಡಿಸೆಂಬರ್ 10 ರಂದು ರಾತ್ರಿ 7 ಗಂಟೆಗೆ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಅವರಿಂದ ಅಬ್ರಕಡಬ್ರ ಜಾದೂ ಪ್ರದರ್ಶನ ನಡೆಯಲಿದೆ.
ಮೇಳದಲ್ಲಿ ಬಾನ್ಸುರಿ ವಾದನ
ಮೇಳದ ರಾಗರಂಗ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಪಂಡಿತ್ ಡಾ.ಪ್ರವೀಣ್ ಗೋಡ್ಖಿಂಡಿ ಅವರು ಬಾನ್ಸುರಿ ವಾದನ ನಡೆಸಿಕೊಡಲಿದ್ದಾರೆ. ಇವರಿಗೆ ತಬಲಾ ಕಲಾವಿದ ಕಿರಣ್ ಗೋಡ್ಖಿಂಡಿ ಸಾತ್ ನೀಡಲಿದ್ದಾರೆ. ಸುನಿಲ್ ಕುಮಾರ್ ಬಾನ್ಸುರಿ ಸಹಕಾರ ನೀಡಲಿದ್ದಾರೆ.
ರೈತರೊಂದಿಗೆ ಸಂವಾದ
ಮೇಳದಲ್ಲಿ ಡಿಸೆಂಬರ್ 10 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ರೈತರೊಂದಿಗೆ ಸಾವಯವ ಕೃಷಿ, ಬಹುಬೆಳೆ ಪದ್ಧತಿ, ಮೌಲ್ಯ ವರ್ಧನೆ, ಮಾರುಕಟ್ಟೆ ಮತ್ತು ಸಹಕಾರಿ ವ್ಯವಸ್ಥೆ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆ ಸಿದ್ಧತೆ ಆರಂಭ, ಅಧಿಕಾರಿಗಳಿಗೆ ತರಬೇತಿ