ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019
ಶಿವಮೊಗ್ಗ ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಲಾವೃತವಾಗಿದ್ದು, ಸರ್ಕಾರಿ ಶಾಲೆಯೊಂದಕ್ಕೆ ರಜೆ ಘೋಷಿಸಲಾಗಿದೆ.

ಟ್ಯಾಂಕ್ ಮೊಹಲ್ಲಾದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಹಲವು ವಸ್ತುಗಳು, ಆಹಾರ ಸಾಮಾಗ್ರಿ ಜಲಾವೃತವಾಗಿದೆ. ಇನ್ನು, ರಾತ್ರಿಯಿಂದಲು ನೀರು ಹೊರ ಹಾಕಲು ಮನೆಯವರು ಹರಸಾಹಸ ಪಡುತ್ತಿದ್ದಾರೆ.
ಮನೆಗಳಿಗೆ ನೀರು ನುಗ್ಗಿದ್ದು ಏಕೆ?
ಭಾರಿ ಮಳೆಯಿಂದಾಗಿ ಟ್ಯಾಂಕ್ ಮೊಹಲ್ಲಾದಲ್ಲಿ ಹಾದು ಹೋಗುವ ರಾಜಾ ಕಾಲುವೆಯಲ್ಲಿ ಭಾರಿ ಪ್ರಮಾಣದ ನೀರು ಹರಿದಿದೆ. ಆದರೆ ಟ್ಯಾಂಕ್ ಮೊಹಲ್ಲಾ ರಸ್ತೆಯಲ್ಲಿ ಸೇತುವೆ ಕಟ್ ಮಾಡಿ, ಪೈಪ್ ಅಳವಡಿಸಲಾಗಿದೆ. ಇದರಲ್ಲಿ ನೀರು ಹರಿದು ಹೋಗಲು ಸಾದ್ಯವಾಗದೆ ಮನೆಗಳಿಗೆ ನುಗ್ಗಿದೆ.

ಸೇತುವೆ ಕಟ್ ಮಾಡಿದ್ದೇಕೆ?
ಈ ರಾಜಾ ಕಾಲುವೆಯಲ್ಲಿ ಕಸ ತುಂಬಿಕೊಂಡಿತ್ತು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಾಜಾ ಕಾಲುವೆಯಲ್ಲಿ ನೀರು ಹರಿಯಲು ಸಾದ್ಯವಾಗಿರಲಿಲ್ಲ. ಸೇತುವೆ ಕೆಳಗೆ ತುಂಬಿಕೊಂಡಿದ್ದ ಕಸವನ್ನು ತೆಗೆಯಲು ಸಾದ್ಯವಾಗಿರಲಿಲ್ಲ. ಹಾಗಾಗಿ ಮಹಾನಗರ ಪಾಲಿಕೆಯೆ ಸೇತುವೆಯನ್ನು ತೆರವು ಮಾಡಿ, ನೀರು ಹರಿಯಲು ಅನುವು ಮಾಡಿಕೊಟ್ಟಿತ್ತು.

ನಿನ್ನೆಯಷ್ಟೆ ಪೈಪ್ ಹಾಕಲಾಗಿತ್ತು
ಅನಿರೀಕ್ಷಿತ ಮಳೆಯಿಂದಾಗಿ ಹೊಸ ಸೇತುವೆ ಕಟ್ಟುವುದಕ್ಕೆ ಮಹಾನಗರ ಪಾಲಿಕೆ ಕೈ ಹಾಕಿರಲಿಲ್ಲ. ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ, ನಿನ್ನೆಯಷ್ಟೆ ರಾಜಾ ಕಾಲುವೆಗೆ ಹೊಸ ಪೈಪ್ ಹಾಕಿ, ಜನರ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮತ್ತೆ ನೀರು ಹರಿಯಲು ಸಾದ್ಯವಾಗದೆ ಮನೆಗಳಿಗೆ ನುಗ್ಗಿದೆ.

ಸ್ಕೂಲ್’ಗೆ ರಜೆ ಘೋಷಣೆ
ಟ್ಯಾಂಕ್ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆಗು ನೀರು ನುಗ್ಗಿದೆ. ಮಕ್ಕಳು, ಶಾಲೆ ಸಿಬ್ಬಂದಿ ಬರಲು ಸಾದ್ಯವಾಗದಂತಹ ಪರಿಸ್ಥಿತಿ ಇದೆ. ಹಾಗಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

ರಾತ್ರಿ ಸ್ವಿಚ್ ಆಫ್, ಬೆಳಗ್ಗೆ ಕಮಿಷನರ್ ಹಾಜರ್
ಮನೆಗಳಿಗೆ ನೀರು ನುಗ್ಗುತ್ತಿದ್ದಂತೆ ಸ್ಥಳೀಯರು ಕಾರ್ಪೊರೇಟರ್ ಮತ್ತು ಪಾಲಿಕೆ ಕಮಿಷನರ್’ಗೆ ಕರೆ ಮಾಡಿದ್ದಾರೆ. ಆದರೆ ಈ ವೇಳೆ ಕಮಿನಷರ್ ಚಿದಾನಂದ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಕಮಿಷನರ್, ಕೆಲವು ನಿರ್ದೇಶನ ನೀಡಿ, ಸ್ಥಳ ಪರಿಶೀಲನೆ ನಡೆಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]