SHIVAMOGGA LIVE NEWS | 1 MARCH 2023
SHIMOGA : ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್ ಶಿಪ್ (Internship) ಭತ್ಯೆಯನ್ನು 30 ಸಾವಿರ ರೂ. ಗೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಸರ್ಕಾರ ಕೂಡಲೆ ಭತ್ಯೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಸದ್ಯ ಇಂಟರ್ನ್ ಶಿಪ್ ಭತ್ಯೆ 14 ಸಾವಿರ ರೂ. ನೀಡಲಾಗುತ್ತಿದೆ. ಇದನ್ನು 30 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತ್ತೊಂದು ವಿಶ್ವವಿದ್ಯಾಲಯ, ಗುಜರಾತ್ ನಲ್ಲಷ್ಟೆ ಇತ್ತು ಈ ವಿವಿ, ಏನಿದರ ವಿಶೇಷತೆ? ಏನೆಲ್ಲ ಕೋರ್ಸ್ ಇದೆ?
ಯಾವುದಕ್ಕೂ ಸಾಲುವುದಿಲ್ಲ
ಪಶು ವೈದ್ಯಕೀಯ ವಿದ್ಯಾರ್ಥಿಗಳು ಪದವಿಯ ಕೊನೆಯ ಒಂದು ವರ್ಷ ಇಂಟರ್ನ್ ಶಿಪ್ (Internship) ಮಾಡಬೇಕು. ರಾಜ್ಯ, ಹೊರ ರಾಜ್ಯದ ಜಿಲ್ಲಾಸ್ಪತ್ರೆಗಳು, ಫಾರ್ಮ್, ಸಂಶೋಧನಾ ಕೇಂದ್ರಗಳಲ್ಲಿ ಇಂಟರ್ನ್ ಶಿಪ್ ಕಡ್ಡಾಯವಿದೆ. ಈ ಅವಧಿಯಲ್ಲಿ ಪ್ರತಿ ತಿಂಗಳು ಇಂಟರ್ನ್ ಶಿಪ್ ಭತ್ಯೆ ಎಂದು ರಾಜ್ಯ ಸರ್ಕಾರ 14 ಸಾವಿರ ರೂ. ನೀಡುತ್ತಿದೆ. ತಿಂಗಳ ಖರ್ಚು, ಶೈಕ್ಷಣಿಕ ಖರ್ಚುಗಳನ್ನು ಇದರಲ್ಲಿಯೇ ನಿರ್ವಹಿಸಬೇಕು. ಆದರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಈ ಭತ್ಯೆ ಯಾವುದಕ್ಕೂ ಸಾಲುವುದಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ವಿದ್ಯಾರ್ಥಿ ವೇತನವು ಸಿಗುವುದಿಲ್ಲ
ಇಂಟರ್ನ್ ಶಿಪ್ ಭತ್ಯ ಕೊಡುವುದರಿಂದ ಈ ಅವಧಿಯಲ್ಲಿ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಮತ್ತಷ್ಟು ಸಂಕಷ್ಟಕ್ಕೀಡಾಗಲಿದ್ದಾರೆ. ಈ ಕುರಿತು ಸರ್ಕಾರಕ್ಕೆ ಹಲವು ಭಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಸರ್ಕಾರವು ಕಿರಿಯ ಮಾನವ ವೈದ್ಯಾಧಿಕಾರಿಗಳಿಗೆ ಇಂಟರ್ನ್ ಶಿಪ್ ಭತ್ಯೆಯನ್ನು 30 ಸಾವಿರ ರೂ.ಗೆ ಹೆಚ್ಚಿಸಿದೆ. ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೂ ಇದೆ ಮಾದರಿಯಲ್ಲಿ ಭತ್ಯೆ ಹೆಚ್ಚಳ ಮಾಡಬೇಕು ಎಂದು ವಿದ್ಯಾರ್ಥಿಗಳು ಸರ್ಕಾರವನ್ನು ಆಗ್ರಹಿಸಿದರು.