ಶಿವಮೊಗ್ಗ ಲೈವ್.ಕಾಂ | SHIMOGA NEWS | 3 NOVEMBER 2020
ಶಿವಮೊಗ್ಗದ ಮಹಾವೀರ ಸರ್ಕಲನ್ನು ಷಾ ಅಮೀನ್ ದಿವಾನ್ ದರ್ಗಾ ಎಂದು ಕರಪತ್ರದಲ್ಲಿ ಮುದ್ರಿಸಿದ್ದ ಎಸ್ಡಿಪಿಐ ಸಂಘಟನೆ ವಿರುದ್ಧ ಇವತ್ತು ವಿಶ್ವ ಹಿಂದೂ ಪರಿಷತ್, ಮಾತೃಶಕ್ತಿ ದುರ್ಗಾ ವಾಹಿನಿ, ಜೈನ್ ಸಮಾಜ ಆಕ್ರೋಶ ವ್ಯಕ್ತಪಡಿಸಿವೆ.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಂಘಟನೆಗಳು, ಎಸ್ಡಿಪಿಐ ಸಂಘಟನೆ ಇತ್ತೀಚೆಗೆ ನಡೆಸಿದ ಪ್ರತಿಭಟನೆ ವೇಳೆ, ಮಹಾವೀರ ವೃತ್ತವನ್ನು ಷಾ ಅಮೀನ್ ದಿವಾನ್ ದರ್ಗಾ ವೃತ್ತ ಎಂದು ಕಾನೂನಿನ ವಿರುದ್ಧವಾಗಿ ನಮೂದಿಸಿ ಕರಪತ್ರ ಹಂಚಿತ್ತು. ಇದರಿಂದ ಅಹಿಂಸಾವಾದಿಗಳಾದ ಜೈನ ಸಮಾಜಕ್ಕೆ ಅತ್ಯಂತ ದುಃಖವಾಗಿದೆ. ಸಮಾಜದ ಆರಾಧ್ಯದೈವ ಮಹಾ ವೀರ ತೀರ್ಥಂಕರ ಅವರ ಹೆಸರಿನಲ್ಲಿರುವ ವೃತ್ತವನ್ನು ಬದಲಾವಣೆ ಮಾಡುವ ಹುನ್ನಾರವಾಗಿದೆ. ಇದನ್ನು ಜೈನಸಮಾಜ ತೀವ್ರವಾಗಿ ಖಂಡಿಸಿದೆ ಎಂದರು.
ಎಸ್.ಡಿ.ಪಿ.ಐ ಸಂಘಟನೆ ಈ ರೀತಿ ಶಿವಮೊಗ್ಗದಲ್ಲಿ ಅನೇಕ ಕಡೆ ಅಧಿಕೃತವಾಗಿರುವ ಬಡಾವಣೆಗಳ ಹೆಸರುಗಳನ್ನು ಅನಧಿಕೃತವಾಗಿ ಬೇರೆ ಬೇರೆ ಹೆಸರಿನ ಮುಖಾಂತರ ಬದಲಾವಣೆ ಮಾಡಿರುವ ಉದಾಹರಣೆಗಳು ಇವರೆ. ಪ್ರಶಾಂತವಾಗಿರುವ ಶಿವಮೊಗ್ಗ ನಗರದಲ್ಲಿ ಹಿಂದುಗಳಿಗೆ ಭಾವನಾತ್ಮಕವಾಗಿ ನೋವು ತಂದು ಕೋಮು ಭಾವನೆಗಳನ್ನು ಕೆರಳಿಸಿ ಶಾಂತಿ ಸೌಹಾರ್ದತೆಗೆ ಧಕ್ಕೆ ತರಲು ಹೊರಟಿದೆ. ಹಾಗಾಗಿ ಎಸ್ಡಿಪಿಐ ಮುಸ್ಲಿಂ ಸಂಘಟನೆಯನ್ನು ನಿಷೇಧಿಸಬೇಕು. ಘಟನೆಗೆ ಕಾರಣವಾದ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ವಿನೋದ್ ಕುಮಾರ್ ಜೈನ್, ವಿಜಯ ಕುಮಾರ್ ದಿನಕರ್, ಮಾಂಗಿ ಲಾಲ್, ಪಾರ್ಶ್ವನಾಥ್, ಯಶೋಧರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ರಮೇಶ್ ಬಾಬು ಜಾಧವ್, ಎಸ್.ಆರ್. ನಟರಾಜ್, ನಾರಾಯಣ ಜಿ.ವರ್ಣೇಕರ್, ರಾಜೇಶ್ ಗೌಡ, ಸತೀಶ್ ಮಂಚಿಮನೆ, ಸುಧಾಕರ್, ಅಂಕುಶ್ ಮೊದಲಾದವರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]