ಶಿವಮೊಗ್ಗದ ಲೈವ್.ಕಾಂ | SHIMOGA NEWS | 25 ಡಿಸೆಂಬರ್ 2021
ರಾಜ್ಯದ ಎರಡನೇ ವಿಸ್ಟಾಡೋಮ್ ರೈಲು ಬೋಗಿ ಇವತ್ತು ಶಿವಮೊಗ್ಗಕ್ಕೆ ಆಗಮಿಸಿತು. ಮೊದಲ ದಿನವೇ ವಿಸ್ಟಾಡೋಮ್ ಬೋಗಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೈಫೈ ಸೌಲಭ್ಯದ ಜೊತೆಗೆ ರೈಲು ಪ್ರಯಾಣಕ್ಕೆ ಹೊಸ ಅನುಭವ ನೀಡಲಿದೆ.
ಯಶವಂತಪುರ – ಬೆಂಗಳೂರು – ಯಶವಂತಪುರ ಇಂಟರ್ ಸಿಟ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದೆ. ಇವತ್ತು ಯಶವಂತಪುರದಿಂದ ಶಿವಮೊಗ್ಗಕ್ಕೆ ಆಮಿಸಿದ್ದ ರೈಲಿನಲ್ಲಿ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಮೊದಲ ಟ್ರಿಪ್’ನಲ್ಲಿ ಶಿವಮೊಗ್ಗಕ್ಕೆ ಏಳು ಪ್ರಯಾಣಿಕರು ವಿಸ್ಟಾಡೋಮ್ ಬೋಗಿಯಲ್ಲಿ ಪ್ರಯಾಣ ಮಾಡಿದ್ದಾರೆ. ಶಿವಮೊಗ್ಗದಿಂದ ಎಂಟು ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.
ಕುತೂಹಲ ಮೂಡಿಸಿದ ವಿಸ್ಟಾಡೋಮ್
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಿಸ್ಟಾಡೋಮ್ ಬೋಗಿ ಬಗ್ಗೆ ಸಾರ್ವಜನಿಕರು, ರೈಲ್ವೆ ಇಲಾಖೆ ಸಿಬ್ಬಂದಿ ಕುತೂಹಲ ವ್ಯಕ್ತಪಡಿಸಿದರು. ಶಿವಮೊಗ್ಗಕ್ಕೆ ರೈಲು ಬರುತ್ತಿದ್ದಂತೆ ವಿಸ್ಟಾಡೋಮ್ ಬೋಗಿ ಹತ್ತಿದ ಜನರು, ಅದರ ವಿಶೇಷತೆಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ರೈಲ್ವೆ ಬೋಗಿಯ ತುಂಬೆಲ್ಲ ಓಡಾಡಿ, ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಈ ಬೋಗಿಯಲ್ಲಿ ಏನೆಲ್ಲ ವಿಶೇಷತೆಗಳಿವೆ
ವಿಸ್ಟೋಡಾಮ್ ಬೋಗಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. 44 ಸೀಟರ್ ಬೋಗಿಯಲ್ಲಿ ಎಲ್ಲವೂ ಆಟೋಮೆಟಿಕ್ ವ್ಯವಸ್ಥೆ. ಬೋಗಿಯೊಳಗೆ ಹೋಗುತ್ತಿದ್ದಂತೆ ಗಾಜಿನ ಬಾಗಿಲು ತನ್ನಿಂತಾನೆ ತೆರೆದುಕೊಳ್ಳುತ್ತದೆ. ಲಗೇಜ್ ಇಡಲು ಪ್ರತ್ಯೇಕ ಕಂಪಾರ್ಟ್’ಮೆಂಟ್ ವ್ಯವಸ್ಥೆ ಇದೆ. ಇನ್ನು, ಎರಡು ಬದಿಯಲ್ಲೂ ಎರಡು ಸೀಟರ್’ನ ಸುಖಾಸನಗಳಿವೆ. ಈ ಆಸನಗಳು ರೈಲಿನ ಕಿಟಕಿಯ ಕಡೆಗೆ ತಿರುಗುತ್ತವೆ.
ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ ಇದೆ. ತಿಂಡಿ, ತಿನಿಸಿಗಳನ್ನು ಇಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ. ವಿಸ್ಟಾಡೋಮ್ ಬೋಗಿಯಲ್ಲಿ ದೊಡ್ಡ ಗಾಜಿನ ಕಿಟಕಿಗಳಿವೆ. ಮೇಲ್ಭಾಗದಲ್ಲಿಯೂ ಗಾಜುಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ತಮ್ಮ ಸೀಟಿನಲ್ಲಿ ಕುಳಿತು ಆಕಾಶದೆಡೆಗೆ ಗಮನ ನೆಡಬಹುದಾಗಿದೆ.
ಪುಟ್ಟ ಕಿಚನ್, ಡಿಫರೆಂಟ್ ವಿನ್ಯಾಸದ ಟಾಯ್ಲೆಟ್
ವಿಸ್ಟೋಡಾಮ್ ಬೋಗಿಯ ಒಂದು ಕೊನೆಯಲ್ಲಿ ಸಂಪೂರ್ಣ ದೊಡ್ಡ ಗಾಜು ಅಳವಡಿಸಲಾಗಿದೆ. ಹಾಗಾಗಿ ರೈಲು ಚಲಿಸುತ್ತಿದ್ದಾಗ ಬೋಗಿಯ ಕೊನೆಯಲ್ಲಿ ನಿಂತು ಸುತ್ತಮುತ್ತಲ ಪರಿಸರವನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ. ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರಿಗೆ ಈ ಜಾಗ ಅತ್ಯಂತ ಪ್ರಿಯವಾಗಲಿದೆ.
ಇನ್ನು, ರೈಲಿನಲ್ಲಿ ಪುಟ್ಟದೊಂದು ಕಿಚನ್ ವ್ಯವಸ್ಥೆ ಮಾಡಲಾಗಿದೆ. ರೆಫ್ರಿಜರೇಟರ್, ಮೈಕ್ರೋ ವೇವ್ ವೋವನ್ ಇಡಲಾಗಿದೆ. ಇನ್ನು, ಈ ಬೋಗಿಯ ಟಾಯ್ಲೆಟ್‘ಗಳು ವಿನ್ಯಾಸವೂ ವಿಭಿನ್ನವಾಗಿದೆ. ಸ್ಲೈಡಿಂಗ್ ಬಾಗಿಲುಗಳು, ಆಟೊಮೆಟೆಡ್ ಲೈಟುಗಳನ್ನು ಅಳವಡಿಸಲಾಗಿದೆ. ಈ ವ್ಯವಸ್ಥೆಗಳು ಪ್ರಯಾಣಿಕರಿಗೆ ಹಿತವಾದ ಅನುಭವ ನೀಡಲಿದೆ.
ನಿತ್ಯ ಸಂಚರಿಸಲಿದೆ ವಿಸ್ಟಾಡೋಮ್ ಬೋಗಿ
ಈವರೆಗೂ ಬೆಂಗಳೂರು – ಮಂಗಳೂರು ರೈಲಿನಲ್ಲಿ ಮಾತ್ರ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಈಗ ಯಶವಂತಪುರ – ಶಿವಮೊಗ್ಗ – ಯಶವಂತಪುರ ಇಂಟರ್ ಸಿಟಿ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. ಈ ಮೂಲಕ ವಿಸ್ಟಾಡೋಮ್ ಬೋಗಿಯೊಂದಿಗೆ ಸಂಚರಿಸುವ ರಾಜ್ಯದ ಎರಡನೇ ರೈಲು ಇದಾಗಿದೆ. ಈ ರೈಲು ಪ್ರತಿದಿನ ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 1.30ರ ಹೊತ್ತಿಗೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ.
ತಾಳಗುಪ್ಪದವರೆಗೆ ವಿಸ್ತರಿಸಿ
2022ರ ಮಾರ್ಚ್ 31ರವರೆಗೆ ಈ ರೈಲಿನಲ್ಲಿ ವಿಸ್ಟಾಡೋಮ್ ಬೋಗಿ ಅಳವಡಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಟೂರಿಸ್ಟ್’ಗಳಿಗೆ, ಪರಿಸರ ಪ್ರಿಯರಿಗೆ ವಿಸ್ಟಾಡೋಮ್ ಬೋಗಿಯಲ್ಲಿನ ಪ್ರಯಾಣ ಹಿತವಾದ ಅನುಭವ ನೀಡಲಿದೆ. ಹಾಗಾಗಿ ಈ ಬೋಗಿ ಇರುವ ಸಂಚಾರವನ್ನು ಶಿವಮೊಗ್ಗಕ್ಕೆ ಸೀಮಿತಗೊಳಿಸದೆ ತಾಳಗುಪ್ಪದವರೆಗೆ ವಿಸ್ತರಣೆ ಮಾಡಬೇಕು ಎಂಬುದು ಪ್ರಯಾಣಿಕರ ಅಭಿಪ್ರಾಯ. ಮಲೆನಾಡಿನ ನೇಸರವನ್ನು ಕಣ್ತುಂಬಿಕೊಳ್ಳಲು ಈ ಮಾರ್ಗದ ಅವಕಾಶವಿದೆ. ಅಲ್ಲದೆ ಈ ಮಾರ್ಗದಲ್ಲಿ ಮಳೆಗಾಲದ ಹೊತ್ತಿಗೆ ವಿಸ್ಟೋಡಾಮ್ ಬೋಗಿಯ ಪ್ರಯಾಣ ಆಹ್ಲಾದಕರ ಎನಿಸಲಿದೆ.
ವಿಸ್ಟೋಡಾಮ್ ಬೋಗಿಯನ್ನು ತಾಳಗುಪ್ಪದವರೆಗೆ ವಿಸ್ತರಣೆ ಮಾಡಿದರೆ ಶಿವಮೊಗ್ಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕಿದೆ. ಮೊದಲ ದಿನದಿಂದಲೇ ಈ ಬೋಗಿಗೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿರುವುದು ರೈಲ್ವೆ ಇಲಾಖೆಗೆ ಸಮಾಧಾನ ತಂದಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುವ ಅಂದಾಜಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200