ಶಿವಮೊಗ್ಗ ಲೈವ್.ಕಾಂ | SHIMOGA | 9 ಮಾರ್ಚ್ 2020
ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳ ಕಾಲ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನಚ್ಚರಿಕೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಪರಿಸ್ಥಿತಿಯಿಲ್ಲ. ಆದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಹುದಾದ 316 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಳ್ಳುವ ಬದಲು ನೀರಿನ ಮೂಲವನ್ನು ಗುರುತಿಸಿ ಪೈಪ್ಲೈನ್ ಅಳವಡಿಕೆಯಂತಹ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಗ್ರಾಮೀಣ ನೀರು ಪೂರೈಕೆ ಇಲಾಖೆ ಸೇರಿದಂತೆ ಎಲ್ಲಾ ಕುಡಿಯುವ ನೀರಿನ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಪ್ರಸ್ತುತ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ನೀರು ಪೂರೈಕೆ ನಡೆಯುತ್ತಿರುವ ಎಲ್ಲಾ 3 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗನೆ ಕಾರ್ಯಾರಂಭ ಮಾಡಬೇಕು ಎಂದು ಹೇಳಿದರು.
ಟ್ಯಾಂಕರ್ ಸಾಫ್ಟ್ವೇರ್
ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಟ್ಯಾಂಕರ್ ಸಾಫ್ಟ್ವೇರ್ ರೂಪಿಸಿದ್ದು, ಈ ಕುರಿತು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸಬೇಕು. ಉಪವಿಭಾಗಾಧಿಕಾರಿ ಮಟ್ಟದಲ್ಲಿ ಟ್ಯಾಂಕರ್ ನೀರು ಸರಬರಾಜು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕಳೆದ ವರ್ಷದ ಕುಡಿಯುವ ನೀರಿನ ಕಾಮಗಾರಿಗಳ ಬಿಲ್ಲು ಪಾವತಿಗೆ ಬಾಕಿ ಇದ್ದರೆ ಅದನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅನುಮತಿ ಇಲ್ಲದೆ ನೀರು ಬಿಡಬಾರದು
ಜಿಲ್ಲೆಯ ಪ್ರಮುಖ ಜಲಾಶಯಗಳಾದ ಗಾಜನೂರು, ಭದ್ರಾ, ಅಂಜನಾಪುರ, ಅಂಬ್ಲಿಗೋಳ ಜಲಾಶಯಗಳಲ್ಲಿ ಜೂನ್ವರೆಗೆ ಕುಡಿಯುವ ನೀರು ಪೂರೈಕೆಗೆ ನೀರು ಲಭ್ಯವಿದೆ. ಆದರೆ ಈಗಾಗಲೇ ನಿಗದಿಯಾಗಿರುವ ನೀರನ್ನು ಬಿಟ್ಟು, ಬೇರೆ ಯಾವುದೇ ಕಾರಣಕ್ಕೂ ನೀರನ್ನು ಜಿಲ್ಲಾಧಿಕಾರಿ ಅನುಮತಿ ಪಡೆಯದೇ ಬಿಡಬಾರದು. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಲಭ್ಯತೆ ಬಗ್ಗೆ ಪ್ರತಿ 15 ದಿನಗಳಿಗೊಮ್ಮೆ ವರದಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ, ಉಪ ವಿಭಾಗೀಯ ಆಯುಕ್ತರಾದ ನಾಗರಾಜ್, ಪ್ರಕಾಶ್ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200