ಶಿವಮೊಗ್ಗ ಲೈವ್.ಕಾಂ | SHIMOGA | 7 ನವೆಂಬರ್ 2019
ಇದು ಸಮಾನ್ಯ KSRTC ಬಸ್ ಅಲ್ಲ. ಇದರಲ್ಲಿ ಪ್ರಯಾಣ ಮಾಡುವುದು ಒಂದು ವಿಶೇಷ ಅನುಭವ. ನೂರಾರು ಬಸ್ಸುಗಳ ನಡುವೆಯು ಕಣ್ಸೆಳೆಯುತ್ತದೆ ಈ ವಾಹನ. ಯಾಕೆಂದರೆ ಇದು ಶಿವಮೊಗ್ಗದಿಂದ ಹೊರಡುವ ಕನ್ನಡದ ರಥ.
ಶಿವಮೊಗ್ಗ – ಹುಬ್ಬಳ್ಳಿ ನಡುವೆ ಪ್ರತಿದಿನ ಸಂಚರಿಸುವ ಸರ್ಕಾರಿ ಬಸ್ಸು, ಹಲವರನ್ನು ತನ್ನತ್ತ ಸೆಳೆಯುತ್ತಿದೆ. ಎಷ್ಟೊ ಬಾರಿ ಪ್ರಯಾಣಿಕರು ಬೇರೆ ಬಸ್ಸುಗಳನ್ನು ಬಿಟ್ಟು ಈ ಬಸ್ಸು ಹತ್ತಿ ಪ್ರಯಾಣ ಮಾಡಿದ ಉದಹಾರಣೆ ಇದೆ. ಅದಕ್ಕೆ ಕಾರಣ ಬಸ್ಸಿನ ಅಲಂಕಾರ.
ಈ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಒಂದೆ ಒಂದು ನಿಮಿಷವು ವ್ಯರ್ಥ ಆಗುವುದಿಲ್ಲ. ಕನ್ನಡ ಭಾಷೆ, ಕರ್ನಾಟಕ ರಾಜ್ಯದ ಕುರಿತು ಹಲವು ಮಾಹಿತಿಗಳು ಪ್ರಯಾಣದ ಅವಧಿಯಲ್ಲಿ ದೊರೆಯುತ್ತದೆ. ಜ್ಞಾನಪೀಠ ಪುರಸ್ಕೃತರು, ಈವರೆಗಿನ ಎಲ್ಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರುಗಳ ಫೋಟೊಗಳು ಬಸ್ಸಿನಲ್ಲಿ ಎಲ್ಲೆಡೆ ಕಾಣಸಿಗುತ್ತದೆ. ಇನ್ನು, ಬಸ್ಸು ನಿಲ್ದಾಣದಿಂದ ಹೊರಡುತ್ತಿದ್ದಂತೆ ಆರಂಭವಾಗುವ ಕನ್ನಡದ ಸುಮಧುರ ಗೀತೆಗಳು ಕೊನೆಯ ಸ್ಟಾಪ್ ತಲುಪುವವರೆಗೆ ಕಿವಿಗೆ ಇಂಪು ನೀಡುತ್ತಲೆ ಇರುತ್ತದೆ.
ಈ ಬಸ್ಸಿನ ಸೀಟುಗಳಿಗೆ ನಂಬರ್ ಇರುವುದಿಲ್ಲ. ಬದಲಾಗಿ ಕನ್ನಡ ವರ್ಣಮಾಲೆಯಲ್ಲಿನ ಅಕ್ಷರಳನ್ನು ಇಡಲಾಗಿದೆ. ದೇಶ ಮತ್ತು ರಾಜ್ಯದ ವೀರ ಸೇನಾನಿಗಳು, ಸ್ವಾತಂತ್ರ್ಯ ಹೋರಾಟಗಾರರು, ಪ್ರಮುಖ ವ್ಯಕ್ತಿಗಳ ಜೀವನ ಚರಿತ್ರೆಯ ಪುಸ್ತಗಳು ಬಸ್ಸಿನಲ್ಲಿ ಸಿಗುತ್ತವೆ. ಅವುಗಳನ್ನು ಅಲ್ಲಿಯೆ ಓದಿ, ಅಲ್ಲಯೆ ಇಟ್ಟು ಬರಬೇಕು.
ಸಾಮಾನ್ಯ ಬಸ್ಸು ಕನ್ನಡದ ರಥವಾಗಿದ್ದು ಹೇಗೆ ಗೊತ್ತಾ?
ಸರ್ಕಾರಿ ಬಸ್ಸಿನಲ್ಲಿ ಕನ್ನಡದ ಕಂಪು ಸೂಸಲು ಕಾರಣ ಇದರ ಕಂಡಕ್ಟರ್ ನಟರಾಜ್ ಕುಂದೂರು. ಮೂಲತಃ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದವರು. ಅಪ್ಪಟ ಕನ್ನಡ ಪ್ರೇಮಿ ನಟರಾಜು ಅವರು, ಬಸ್ಸಿಗೆ ಅಲಂಕಾರ ಮಾಡಿ, ಅದನ್ನು ಕನ್ನಡದ ರಥವಾಗಿ ಪರಿವರ್ತಿಸಿದ್ದಾರೆ. ಇದಕ್ಕಾಗಿಯೆ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ಸುಮಾರು 2 ಸಾವಿರ ರುಪಾಯಿ ಮೀಸಲಿಟ್ಟಿದ್ದಾರೆ. ಹಾಗಾಗಿ ಈ ಬಸ್ಸು ಹತ್ತುವ ಪ್ರತಿಯೊಬ್ಬರಿಗು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಕುರಿತು ಹಲವು ಮಾಹಿತಿ ಲಭ್ಯವಾಗಲಿದೆ.
ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ, ಕರ್ನಾಟಕ ಅನ್ನುವವರಿಗಿಂತಲು ವಿಭಿನ್ನವಾಗಿ ನಿಲ್ಲುತ್ತಾರೆ ನಟರಾಜು ಕುಂದೂರು. ಇವರ ಕನ್ನಡ ಸೇವೆ ಸಾವಿರಾರು ಜನರ ಮನಸ್ಸು ಗೆದ್ದಿದೆ. ರಾಜ್ಯ ರಸ್ತೆ ಸಾರಿಗೆ ಇಲಾಖೆ ಹೆಮ್ಮೆ ಪಡುವಂತೆ ಮಾಡಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]