ಶಿವಮೊಗ್ಗ ಲೈವ್.ಕಾಂ | SHIMOGA | 3 ಫೆಬ್ರವರಿ 2020
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿವಿ ಮತ್ತು ಶಾಹಿನ್ ಬಾಗ್’ನಲ್ಲಿ ಎನ್.ಆರ್.ಸಿ, ಸಿ.ಎ.ಎ, ಎನ್.ಪಿ.ಆರ್, ವಿರುದ್ಧ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗುಂಡುಹಾರಿಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಇವತ್ತು ಪೀಸ್ ಆರ್ಗನೈಸೇಶನ್ ಮಹಿಳಾ ಘಟಕದ ವತಿಯಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಶಾಂತಿಯುತ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಏಕಾಏಕಿಯಾಗಿ ರಾಮ್ ಭಕ್ತ ಗೋಪಾಲ್ ಎಂಬಾತ, ಪ್ರಚೋದನಕಾರಿ ಹೇಳಿಕೆ ಕೂಗುತ್ತ ಹೋರಾಟಗಾರರ ವಿರುದ್ಧ ಗುಂಡು ಹಾರಿಸಿದ್ದಾನೆ. ಪೊಲೀಸರ ಎದುರಲ್ಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನಾ ಸ್ಥಳದಲ್ಲಿದ್ದ ದೆಹಲಿ ಪೊಲೀಸರು ಪ್ರತಿಭಟನಾಕಾರರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಕೂಡ ಪ್ರತಿಭಟನಾಕಾರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ಶಾಹಿನ್ ಬಾಗ್’ನಲ್ಲೂ ಸಹ ಕಪಿಲ್ ಗುಜ್ಜರ್ ಎಂಬಾತ ಮಹಿಳೆಯರ, ಮಕ್ಕಳ ಮೇಲೆ ಗುಂಡನ್ನು ಹಾರಿಸಿದ್ದಾನೆ. ಹೋರಾಟಗಳನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರ್ಕಾರದ ಸಚಿವರು, ಬಿಜೆಪಿಯ ಕೆಲ ರಾಜಕಾರಣಿಗಳು ದೆಹಲಿಯ ಚುನಾವಣಾ ಪ್ರಚಾರದಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಸಹಚರರು, ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಎಹ್ಸಾಸ್, ರೇಷ್ಮಾ, ಸಮೀನ ಮತ್ತಿತರರು ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]