ಶಿವಮೊಗ್ಗ ಲೈವ್.ಕಾಂ | SHIMOGA | 2 ಮಾರ್ಚ್ 2020
ಭದ್ರಾ ಜಲಾಶಯದಿಂದ ಆರು ಟಿಎಂಸಿ ನೀರು ಹೊರ ಹರಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದ್ದು, ಇದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಕ್ಕೀಡಾಗಿದ್ದಾರೆ. ಡ್ಯಾಮ್ನಲ್ಲಿರುವ ನೀರನ್ನು ಅಪವ್ಯಯ ಮಾಡಿದರೆ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಯಶವಂತರಾವ್ ಘೋರ್ಪಡೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಭದ್ರಾ ಜಲಾಶಯದಲ್ಲಿ 53.090 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ ಸುಮಾರು ಆರು ಟಿಎಂಸಿ ನೀರನ್ನು ನದಿ ಮೂಲಕ ಹರಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಇಂತಹ ಸಾಹಸಕ್ಕೆ ಕೈ ಹಾಕಬೇಡಿ
ಆರು ಟಿಎಂಸಿ ನೀರನ್ನು ನದಿಗೆ ಹರಿಸುವ ನಿರ್ಧಾರವನ್ನು ಸರ್ಕಾರ ಕೂಡಲೆ ಹಿಂಪಡೆಯಬೇಕು. ಒಂದು ವೇಳೆ ನೀರು ಹರಿಸಲು ನಿರ್ಧರಿಸಿದ್ದೇ ಆದಲ್ಲಿ ಮುಂದೆ ಆಗುವ ಬೆಳೆ ನಷ್ಟಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೇ ಜಿಲ್ಲೆಯವರಾಗಿದ್ದು, ಇಂತಹ ಸಾಹಸಕ್ಕೆ ಅವರು ಕೈ ಹಾಕಬಾರದು ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಎಚ್ಚರಿಕೆ ನೀಡಿದರು.

ಎಷ್ಟೆಷ್ಟು ನೀರು ಯಾವುದಕ್ಕೆ ಬಳಕೆಯಾಗುತ್ತೆ
ಜಲಾಶಯದಲ್ಲಿರುವ 53.090 ಟಿಎಂಸಿ ನೀರಿನ ಪೈಕಿ ಎಡ ಮತ್ತು ಬಲದಂಡೆ ನಾಲೆಗಳಿಗೆ 29 ಟಿಎಂಸಿ, ತರೀಕೆರೆ, ಭದ್ರಾವತಿ, ಹರಿಹರ, ರಾಣೆಬೆನ್ನೂರು ಸೇರಿದಂತೆ ಹಲವು ನಗರಗಳ ಕುಡಿಯುವ ನೀರು, ಕೈಗಾರಿಕೆ, ಜಲಚರಗಳಿಗಾಗಿ 7.048 ಟಿಎಂಸಿ, ಇಂಗುವ ನೀರಿನ ಪ್ರಮಾಣ 1.389 ಟಿಎಂಸಿ, ಜಲಾಶಯದಿಂದ ಆವಿಯಾಗುವ ನೀರು 1.500 ಟಿಎಂಸಿ, ಡೆಡ್ ಸ್ಟೋರೇಜ್ 13.830 ಇರುತ್ತದೆ. ಈಗ ಆರು ಟಿಎಂಸಿ ನೀರಿನ ಹೊರಗೆ ಹರಿಸಿದರೆ ಅಚ್ಚಕಟ್ಟು ವ್ಯಾಪ್ತಿಯ ರೈತರು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತ ಸಂಘ ಆರೋಪಿಸಿದೆ.