SHIVAMOGGA LIVE NEWS | 3 ಮಾರ್ಚ್ 2022
ಬಜರಂಗದಳ ಕಾರ್ಯಕರ್ತ ಹರ್ಷ ಕಗ್ಗೊಲೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ಯಡಿಯೂರಪ್ಪ ಅವರು ಹರ್ಷ ನಿವಾಸಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ತಾವು ಮತ್ತು ಯಡಿಯೂರಪ್ಪ ಅವರು ಸರಕಾರದ ಪರವಾಗಿ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.
ವಿಶ್ವನಾಥ ಶೆಟ್ಟಿ ಕುಟುಂಬಕ್ಕೂ ನೆರವು
ವಿಶ್ವನಾಥ ಶೆಟ್ಟಿ ಕೊಲೆಯಾದಾಗ ಅವರ ಕುಟುಂಬಕ್ಕೆ ಬಿಜೆಪಿ ವತಿಯಿಂದ 18 ಲಕ್ಷ ರೂ. ತಲುಪಿಸಿತ್ತು. ಟೀಕೆ ಟಿಪ್ಪಣಿಗಳು ಸ್ವಾಭಾವಿಕ. ಆ ಸಂದರ್ಭದಲ್ಲಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ವಿಶ್ವನಾಥ ಶೆಟ್ಟಿ ಕುಟುಂಬಕ್ಕೂ ಸಹ ಹಿಂದೂ ಸಮಾಜ ಏನೇನು ಸಹಾಯ ಮಾಡಬಹುದೋ ಅದನ್ನು ಮಾಡ್ತೇವೆ.ಕೆಲವು ಮುಸಲ್ಮಾನ್ ಗೂಂಡಾಗಳು ಗಾಜನೂರು ಬಳಿ ವಿಶ್ವನಾಥಶೆಟ್ಟಿ ಅವರ ಹತ್ಯೆ ನಡೆಸಿದ್ದರು ಎಂದರು.
SDPI, PFI ನಿಷೇಧಕ್ಕೆ ಮುಸ್ಲಿಂ ಶಾಸಕರ ಸಭೆ
ಕೊಲೆ ಮಾಡಿದ ಮುಸಲ್ಮಾನ್ ಗೂಂಡಾಗಳ ಕೃತ್ಯವನ್ನು ಕಾಂಗ್ರೆಸ್ ಇದುವರೆಗೂ ಖಂಡನೆ ವ್ಯಕ್ತಪಡಿಸಿಲ್ಲ. ಅಲ್ಲಾ ಹು ಅಕ್ಬರ್ ಅಂತ ಕೂಗಿದವರ ಮನೆಗೆ ರಾಜ್ಯದ ನಾಯಕರ ತಂಡವೇ ಭೇಟಿ ನೀಡಿದೆ. ಯಾಕೆ ಹಿಂದೂಗಳ ಹತ್ಯೆಯಾದಾಗ ಅವರ ನೆನಪು ಆಗಲಿಲ್ವಾ. ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆಯಿತು. ಎಲ್ಲಾ ಮುಸಲ್ಮಾನ್ ಶಾಸಕರು ಸಭೆ ನಡೆಸಿ, ಇಂತಹ ಘಟನೆಗೆ ಪಿಎಫ್ಐ, ಎಸ್.ಡಿ.ಪಿ.ಐ ಕಾರಣವಾಗಿದೆ. ಕ್ರಮ ಕೈಗೊಳ್ಳಿ ಅಂದಿದ್ದರು. ಆ ನಾಯಕರುಗಳೇ ಸಂಘಟನೆ ನಿಷೇಧ ಮಾಡಿ ಅಂದಿದ್ದರು. ಆದರೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮಾತ್ರ ಆರ್.ಎಸ್.ಎಸ್ ಕಾರಣ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಆಸ್ತಿ, ಪಾಸ್ತಿ ಹಾನಿಗೆ ಪರಿಹಾರ
ಗಲಭೆ ವೇಳೆ ಆಸ್ತಿ-ಪಾಸ್ತಿ ಹಾನಿ ಮಾಡಿದವರಲ್ಲಿ ಹೊರಗಡೆಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಸ್ತಿ-ಪಾಸ್ತಿ ನಷ್ಟ ಆಗಿರುವವರಿಗೆ ಸರಕಾರದಿಂದ ಪರಿಹಾರ ಕೊಡ್ತೇವೆ ಎಂದು ಸಚಿವ ಈಶ್ವರಪ್ಪ ಭರವಸೆ ನೀಡಿದರು.
ಟಿಕೆಟ್ ವಿಚಾರಕ್ಕೆ ಆಕ್ರೋಶ
ಶಿವಮೊಗ್ಗ ಕ್ಷೇತ್ರದ ಟಿಕೆಟ್ ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ ಎಂಬ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿ.ಕೆ.ಹರಿಪ್ರಸಾದ್ ಅವರಿಗೆ ಇದುವರೆಗೆ ನೇರ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ತೆಗೆದುಕೊಳ್ಳುವುದಕ್ಕೆ ಸಾದ್ಯವಾಗಲಿಲ್ಲ. ಬಿ.ಕೆ.ಹರಿಪ್ರಸಾದ್ ಮೊದಲು ತಾಲೂಕು ಪಂಚಾಯ್ತಿ ಚುನಾವಣೆಗೆ ಟಿಕೆಟ್ ಪಡೆದು ಗೆದ್ದು ಬರಲಿ ನೋಡೋಣ. ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಬಾರಿ ನೇರ ಚುನಾವಣೆಯಲ್ಲಿ ಗೆದ್ದು ಬರಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಶಿವಮೊಗ್ಗ ಕ್ಷೇತ್ರವನ್ನು ಹರ್ಷ ಕುಟುಂಬಕ್ಕೆ ಬಿಟ್ಟು ಕೊಡಲಿ ಅಂತ ಹೇಳುವುದಕ್ಕೆ ಇಬ್ರಾಹಿಂ, ಹರಿಪ್ರಸಾದ್ ಯಾವನು ಎಂದು ಏಕವಚನದಲ್ಲಿ ಪ್ರಶ್ನಿಸಿದ ಈಶ್ವರಪ್ಪ ಅವರು, ಬಿಜೆಪಿ ಟಿಕೆಟ್ ಹಂಚಿಕೆ ಮಾಡಲು ಅವರಿಗೆ ಯಾರೂ ಅಧಿಕಾರ ಕೊಟ್ಟವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.