ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 APRIL 2023
SHIMOGA : ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ (BJP List) ಸೋಮವಾರ ಪ್ರಕಟವಾಗಲಿದೆ. ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗುತ್ತದೆ ಎಂಬುದು ಸದ್ಯದ ಕುತೂಹಲ. ಶಿಕಾರಿಪುರ ಮತ್ತು ತೀರ್ಥಹಳ್ಳಿ ಕ್ಷೇತ್ರಗಳ ಹೊರತು ಉಳಿದ್ಯಾವ ಕ್ಷೇತ್ರದಲ್ಲಿಯು ‘ತಾನೆ ಅಭ್ಯರ್ಥಿ’ ಎಂದು ಆಕಾಂಕ್ಷಿಗಳು ಧೈರ್ಯವಾಗಿ ಹೇಳಿಕೊಳ್ಳಲಾಗಿದ ಸ್ಥಿತಿ ಇದೆ. ಹಾಗಾಗಿ ಮೊದಲ ಪಟ್ಟಿಯ (BJP List) ಕುರಿತು ಕಾರ್ಯಕರ್ತರ ನಡುವೆ ಲೆಕ್ಕಾಚಾರಗಳು ಆರಂಭವಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಆರು ಕ್ಷೇತ್ರ ಗೆದ್ದಿತ್ತು ಬಿಜೆಪಿ
2018ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರ ಹೊರತು ಉಳಿದ ಆರು ಕ್ಷೇತ್ರಗಳಲ್ಲಿಯು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಶಿಕಾರಿಪುರದಿಂದ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಸಾಗರದಿಂದ ಹರತಾಳು ಹಾಲಪ್ಪ, ಸೊರಬದಿಂದ ಕುಮಾರ್ ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರದಿಂದ ಕೆ.ಬಿ.ಆಶೋಕ್ ನಾಯ್ಕ್ ಅವರು ಆಯ್ಕೆಯಾಗಿದ್ದರು. ಈ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆ ಎಂದು ಬಿಂಬಿಸಲಾಗಿತ್ತು. ಆದರೆ ಈ ಬಾರಿ ಅಭ್ಯರ್ಥಿಗಳ ಆಯ್ಕೆ ಸುಲಭದ್ದಾಗಿಲ್ಲ. ಬಹತೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಯಾವ್ಯಾವ ಕ್ಷೇತ್ರದಲ್ಲಿ ಹೇಗಿದೆ ಪರಿಸ್ಥಿತಿ?
ಶಿಕಾರಿಪುರ : ಕ್ಷೇತ್ರದಿಂದ ಬಿ.ವೈ.ವಿಜಯೇಂದ್ರ ಅವರು ಕಣಕ್ಕಿಳಿಯುವುದು ನಿಶ್ಚಿತ. ಹಾಗಾಗಿ ಈ ಕ್ಷೇತ್ರದಲ್ಲಿ ಯಾವುದೆ ಗೊಂದಲಗಳಿಲ್ಲ. ವಿಜಯೇಂದ್ರ ಅವರು ಈಗಾಗಲೇ ಕ್ಷೇತ್ರದಾದ್ಯಂತ ಸಂಚಾರ ಮಾಡಿ, ತಮ್ಮ ಪರವಾಗಿ ಮತ ಕೇಳುತ್ತಿದ್ದಾರೆ.
ತೀರ್ಥಹಳ್ಳಿ : ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮತ್ತೊಮ್ಮೆ ಸ್ಪರ್ಧಿಸುವು ಬಹುತೇಕ ಖಚಿತ. ಪಕ್ಷದೊಳಗೆ ಅವರಿಗೆ ಅಂತಹ ವಿರೋಧವೇನಿಲ್ಲ. ಟಿಕೆಟ್ ಆಕಾಂಕ್ಷಿಗಳಿದ್ದರೂ ಸದ್ಯ ಆರಗ ಜ್ಞಾನೇಂದ್ರ ಅವರಷ್ಟು ಪ್ರಭಾವಿಯೇನಲ್ಲ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ : ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಶಾಸಕ ಕೆ.ಎಸ್.ಈಶ್ವರಪ್ಪ ಅವರು ಮತ್ತೊಮ್ಮೆ ಕಣಕ್ಕಿಳಿಯಬೇಕು ಅಥವಾ ತಮ್ಮ ಪುತ್ರ ಕೆ.ಈ.ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸಬೇಕು ಎಂಬ ಯೋಚನೆಯಲ್ಲಿದ್ದಾರೆ. ಆದರೆ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು ಪ್ರಬಲವಾಗಿ ಟಿಕೆಟ್‍ಗೆ ಪಟ್ಟು ಹಿಡಿದಿದ್ದಾರೆ. ಇದು ಈಶ್ವರಪ್ಪ ಅವರಿಗೆ ನುಂಗಲಾರದ ತುತ್ತಾಗಿದೆ. ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರ ಹೆಸರು ಮುನ್ನಲೆಯಲ್ಲಿದೆ.
ಸಾಗರ : ಶಾಸಕ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ಕಗ್ಗಂಟಾಗಿದೆ. ಈವರೆಗೂ ಅವರ ಜೊತೆಗಿದ್ದವರೆ ಈಗ ಹಾಲಪ್ಪ ಅವರಿಗೆ ಟಿಕೆಟ್ ನೀಡದಂತೆ ಬಿಜೆಪಿ ಮುಖಂಡರಿಗೆ ಮನವಿ ಮಾಡುತ್ತಿದ್ದಾರೆ ಎನ್ನಲಾಗತ್ತಿದೆ. ಇದರ ನಡುವೆ ಹಲವರು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಕೆ.ಎಸ್.ಪ್ರಶಾಂತ್, ಪ್ರಸನ್ನ ಕೆರೆಕೈ, ಚೇತನ್ ರಾಜ್ ಕಣ್ಣೂರು, ಕೆ.ವಿ.ಪ್ರವೀಣ್ ಅವರ ಹೆಸರುಗಳು ಕೇಳಿ ಬಂದಿವೆ.
ಸೊರಬ : ಕುಮಾರ್ ಬಂಗಾರಪ್ಪ ಅವರು ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆದರೆ ಪಕ್ಷದೊಳಗೆ ಕಳೆದ ಐದು ವರ್ಷದಿಂದ ಮೂಲ, ವಲಸಿಗ ತಿಕ್ಕಾಟ ನಡೆಯುತ್ತಿದೆ. ಅದಿನ್ನು ಶಮನವಾಗಿಲ್ಲ. ಈಚೆಗೆ ನಮೋ ವೇದಿಕೆ ಹೆಸರಿನಲ್ಲಿ ಕುಮಾರ್ ಬಂಗಾರಪ್ಪ ವಿರುದ್ಧ ಹೇಳಿಕೆಗಳು, ಸಭೆಗಳು, ಹೋರಾಟಗಳಾದವು. ಹಾಗಾಗಿ ಕ್ಷೇತ್ರದ ಟಿಕೆಟ್ ವಿಚಾರವಾಗಿ ಲೆಕ್ಕಾಚಾರಗಳು ಗರಿಗೆದರಿವೆ. ಡಾ. ಜ್ಞಾನೇಶ್, ಗೀತಾ ಮಲ್ಲಿಕಾರ್ಜುನ, ಅಂಡಿಗೆ ಅಶೋಕನಾಯ್ಕ ಅವರು ಹೆಸರುಗಳು ಕೂಡ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
ಇದನ್ನೂ ಓದಿ – ಈಶ್ವರಪ್ಪ ವಿರುದ್ಧ ಶಿವಮೊಗ್ಗ ಕಾಂಗ್ರೆಸ್ ನಾಯಕರು ಗರಂ, ಪದೇ ಪದೆ ಸಿದ್ದರಾಮಯ್ಯ ಟೀಕೆಗೆ ಕಾರಣ ಬಿಚ್ಚಿಟ್ಟ ಮುಖಂಡರು
ಶಿವಮೊಗ್ಗ ಗ್ರಾಮಾಂತರ : ಕೆ.ಬಿ.ಅಶೋಕ್ ನಾಯ್ಕ್ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಟಿಕೆಟ್ ಪಡೆಯುವುದು ಅಷ್ಟು ಸುಲಭದ್ದಲ್ಲ ಅನ್ನುವುದು ಅಶೋಕ್ ನಾಯ್ಕ್ ಅವರಿಗೂ ಗೊತ್ತಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಮಾಜಿ ಶಾಸಕ ಕೆ.ಜಿ.ಕುಮಾರ ಸ್ವಾಮಿ, ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರಿ, ಶಿವರಾಜ್ ಅವರ ಹೆಸರು ಮುನ್ನಲೆಗೆ ಬಂದಿದೆ.
ಭದ್ರಾವತಿ : ಭದ್ರಾವತಿಯಲ್ಲಿ ಭದ್ರವಾಗಿ ನೆಲೆಯೂರಲು ಬಿಜೆಪಿ ಹರಸಾಹಸ ಪಡುತ್ತಿದೆ. ಇದೆ ಕಾರಣಕ್ಕೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಹವಣಿಸುತ್ತಿದೆ. ಭದ್ರಾವತಿಯಲ್ಲಿ ಮಂಗೋಟೆ ರುದ್ರೇಶ್, ಪವಿತ್ರಾ ರಾಮಯ್ಯ, ತೀರ್ಥಯ್ಯ, ಧರ್ಮಪ್ರಸಾದ್, ಎಸ್.ಕುಮಾರ್, ಕೂಡ್ಲಿಗೆರೆ ಹಾಲೇಶ್ ಅವರು ಹೆಸರುಗಳು ಮುನ್ನಲೆಯಲ್ಲಿದೆ.