ಶಿವಮೊಗ್ಗ ಲೈವ್.ಕಾಂ |SHIMOGA NEWS | 2 DECEMBER 2020
ಲವ್ ಜಿಹಾದ್, ಗೋ ಹತ್ಯೆ ನಿಷೇಧ, ಕುರುಬರ ಎಸ್ಟಿ ಹೋರಾಟಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಲವ್ ಜಿಹಾದ್ ಸಂಬಂಧ ಕಾಯ್ದೆ ಜಾರಿಯಾಗುವ ಮೊದಲೇ ಬಾಯಿಗೆ ಬಂದಂತೆ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಅದರಲ್ಲು ಕ್ರಾಸ್ಬೀಡ್ ಎಂಬರ್ಥದ ಅವರ ಮಾತು ಅಯೋಗ್ಯತನದ್ದು. ಇಂದಿರಾಗಾಂಧಿ ಮುಸ್ಲಿಂ ಒಬ್ಬರನ್ನು, ಸೋನಿಯಾ ಮತ್ತೊಂದು ಜಾತಿಯೋರ್ವನನ್ನು, ಪ್ರಿಯಾಂಕ ಕ್ರಿಶ್ಚಿಯನ್ನರನ್ನು ಮದುವೆಯಾಗಿದ್ದಾರೆ. ಹಾಗಾದರೆ ಇವರೆಲ್ಲರೂ ಕ್ರಾಸ್ ಬೀಡ್‍ಗಳಾ ಎಂದು ಕುಟುಕಿದರು.
ಮದುವೆಯಾಗಿ ಅರ್ಧಕ್ಕೆ ಕೈಬಿಡುವ ಘಟನೆ
ಮುಸ್ಲಿಂ ಯುವಕರು ಹಿಂದು ಯುವತಿಯರನ್ನು ವಂಚಿಸಿ ಮದುವೆಯಾಗಿ ಅರ್ಧಕ್ಕೆ ಕೈಬಿಡುವ ಘಟನೆಗಳು ಬೇಕಾದಷ್ಟಿವೆ. ಇಂತಹ ಹೆಣ್ಣು ಮಕ್ಕಳ ಕಣ್ಣೀರನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಶಿವಮೊಗ್ಗದಲ್ಲಿಯೂ ಸಹ ಈ ರೀತಿಯ ಘಟನೆಗಳು ನನಗೆ ತಿಳಿದುಬಂದಿವೆ. ಸಿದ್ದರಾಮಯ್ಯ ಅವರಿಗೆ ಹಿಂದೂ ಹೆಣ್ಣುಮಕ್ಕಳ ಬಗ್ಗೆಯೇ ಗೊತ್ತಿಲ್ಲ. ಹಾಗಾಗಿ ಮಾತನಾಡಿದ್ದಾರೆ. ಕ್ರಾಸ್ ಬ್ರೀಡ್ ಎಂಬ ಪದ ಉಪಯೋಗಿಸಿದ ಅವರಿಗೆ ನಾಚಿಕೆಯಾಗಬೇಕು ಎಂದರು.
ಹಿಂದೂ ಹೆಣ್ಣುಮಕ್ಕಳ ಸುರಕ್ಷತೆಗೆ ಕಾನೂನು
ಹೆಣ್ಣು ಭೋಗದ ವಸ್ತುವಲ್ಲ. ಎಷ್ಟೋ ಮುಸ್ಲಿಂ ಯುವಕರು ಹಿಂದು ಹೆಣ್ಣುಮಕ್ಕಳನ್ನು ಗರ್ಭಿಣಿಯನ್ನಾಗಿ ಮಾಡಿದ್ದಾರೆ. ಅಂತಹ ಹೆಣ್ಣುಮಕ್ಕಳು ಗಂಡನ ಮನೆಗೂ ಹೋಗದೇ, ತವರು ಮನೆಗೂ ಹೋಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಹಿಂದು ಹೆಣ್ಣುಮಕ್ಕಳ ಸುರಕ್ಷತೆಗಾಗಿ ಲವ್ ಜಿಹಾದ್ ಕಾನೂನನ್ನು ಜಾರಿಗೆ ತಂದೇ ತರುತ್ತೇವೆ. ಹಿಂದೂ ಸಮಾಜ ಗಟ್ಟಿಯಾಗಿರುವುದರಿಂದ ಲವ್ ಜಿಹಾದ್ ಪ್ರಕರಣಗಳು ಕಡಿಮೆಯಾಗಿವೆ ಎಂದರು.
ತಾಯಿಗೆ ವಯಸ್ಸಾಗಿದೆ, ಬೀದಿಗೆ ಬಿಡ್ತಾರಾ?
ಸಿದ್ದರಾಮಯ್ಯ ಗೋಹತ್ಯೆ ವಿಚಾರದಲ್ಲಿ ಮಾತನಾಡಿದ್ದಾರೆ. ಗೋವು ಹಿಂದು ಸಂಸ್ಕೃತಿಯ ಪ್ರತೀಕವಾಗಿದೆ. ಮುದಿ ದನಗಳನ್ನು ಬಿಜೆಪಿ, ಆರ್‍ಎಸ್‍ಎಸ್ ಅವರ ಮನೆ ಬಾಗಿಲಿಗೆ ಬಿಡಬೇಕು ಎಂಬ ಅವರ ಹೇಳಿಕೆ ಎಷ್ಟೊಂದು ಅಸಂಬದ್ದವಾಗಿದೆ. ಅವರ ತಾಯಿಗೂ ವಯಸ್ಸಾಗಿದೆ. ಅವರನ್ನು ಹೀಗೆ ಬೀದಿಗೆ ಬಿಡುತ್ತಾರಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಗೋಹತ್ಯೆ ತಡೆಯಲು ಹೋದ ಅನೇಕ ಹಿಂದು ಯುವಕರನ್ನು ಮಂಗಳೂರಿನಲ್ಲಿ ಕೊಲೆ ಮಾಡಲಾಗಿದೆ. ಇದು ಮುಸಲ್ಮಾನರ ಓಲೈಕೆಯೇ ಎಂದ ಅವರು, ಗೋಹತ್ಯೆ ನಿಷೇಧ ಕಾನೂನು ಕೂಡ ಜಾರಿಗೆ ತಂದೇ ತರುತ್ತೇವೆ. ಇದರಿಂದ ಹಿಂದು ಸಮಾಜ ಮತ್ತಷ್ಟು ಜಾಗೃತವಾಗುತ್ತದೆ ಎಂದರು.
ನಾನು ಕುರುಬ ನಾಯಕನಲ್ಲ
ಕುರುಬರ ಎಸ್‍ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್ ಕೈವಾಡವಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ನಾನು ಕುರುಬ ನಾಯಕನಲ್ಲ. ಹಿಂದುತ್ವದ ಪ್ರತಿಪಾದಕ. ಇದು ಅವರಿಗೆ ನೆನಪಿರಲಿ. ಕುರುಬ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕೆಂಬ ಹೋರಾಟದಲ್ಲಿ ಜನಾಂಗದ ಎಲ್ಲರು ಇದ್ದಾರೆ. ಇದನ್ನು ಮರೆತು ಸಿದ್ದರಾಮಯ್ಯ ಇದರಲ್ಲಿ ಆರ್‍ಎಸ್‍ಎಸ್ ಅನ್ನು ಎಳೆತಂದಿದ್ದಾರೆ. ಇದು ಖಂಡನೀಯ. ಜಾತಿ ರಾಜಕಾರಣವನ್ನು ನಾನೆಂದೂ ಮಾಡುವುದಿಲ್ಲ. ಇದು ಅವರಿಗೆ ನೆನಪಿರಲಿ ಎಂದರು.
ಕಾಂಗ್ರೆಸ್‍ನಲ್ಲಿ ಇರಲು ಅಯೋಗ್ಯರು
ಸಿದ್ದರಾಮಯ್ಯ ಅವರು ಕಾಂಗ್ರೆಸ್ನಲ್ಲಿ ಇರಲು ಅಯೋಗ್ಯರು. ಅವರು ಕೂಡಲೇ ಹಿಂದು ಸಮಾಜದ ಕ್ಷಮೆ ಕೇಳಬೇಕು ತಮ್ಮ ಹೇಳಿಕೆಗಳನ್ನು ವಾಪಾಸ್ ತೆಗೆದುಕೊಳ್ಳಬೇಕು. ಇನ್ನಾದರೂ ಮೂರ್ಖತನದ ಮಾತುಗಳನ್ನು ಬಿಡಬೇಕು ಎಂದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200